ಬೆಂಗಳೂರು: ಯಕ್ಷಗಾನದ ಹಾಸ್ಯರಾಜ ಎಂದೇ ಹೆಸರಾಗಿದ್ದ, ಶುದ್ಧ ಹಾಸ್ಯ ನೀಡುವ ಮೂಲಕ ಯಕ್ಷಗಾನ ಪ್ರಿಯ ಪ್ರೇಕ್ಷಕರ ಮನರಂಜಿಸುತ್ತಿದ್ದ ತೆಂಕುತಿಟ್ಟು ಯಕ್ಷಗಾನದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಇಂದು ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡವು ಇಂದಿನಿಂದ ಬೆಂಗಳೂರಿನಲ್ಲಿ ನಡೆಸಿಕೊಡಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಯರಾಮ ಆಚಾರ್ಯರು ಆಗಮಿಸಿದ್ದರು. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ತೀವ್ರತರವಾದ ಹೃದಯನೋವು ಕಾಣಿಸಿಕೊಂಡಿದೆ. ಅವರೊಂದಿಗಿದ್ದ ಇತರ ಕಲಾವಿದರು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಬಂಟ್ವಾಳ ಬೈಪಾಸ್‌ನಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬಂಟ್ವಾಳದಲ್ಲಿ 1957ರ ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಹಾಗೂ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು.
ಬಂಟ್ವಾಳ ಶಾಸಕರಿಂದ ಸಂತಾಪ: ಜಯರಾಮ ಆಚಾರ್ಯ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂತಾಪ ವ್ಯಕ್ತಪಡಿಸಿದ್ದಾರೆ. ''ತೆಂಕು ತಿಟ್ಟಿನ ಹಿರಿಯ ಹಾಸ್ಯ ಕಲಾವಿದ ಶ್ರೀ ಜಯರಾಮ ಆಚಾರ್ಯ ಬಂಟ್ವಾಳ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣ ವಿಷಾದನೀಯ ಸಂಗತಿ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ. ಹಾಗೂ ಕುಟುಂಬ ವರ್ಗಕ್ಕೆ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿಃ'' ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement