ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಲು ಅಕ್ರಮ ಹಣ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಬಳ್ಳಾರಿ ಕಾಂಗ್ರೆಸ್ ಸಂಸದ ಇ ತುಕಾರಾಂ ಅವರನ್ನು ಅನರ್ಹಗೊಳಿಸುವಂತೆ ಬಿಜೆಪಿ ಅ.22 ರಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಚುನಾವಣೆಯಲ್ಲಿ ಮಾಡಿದ ನಿಜವಾದ ಖರ್ಚುಗಳ ಬಗ್ಗೆ ತುಕಾರಾಮ್ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಚುನಾವಣಾ ಸಮಿತಿಗೆ ಪ್ರತ್ಯೇಕ ಜ್ಞಾಪಕ ಪತ್ರ ಸಲ್ಲಿಸಿರುವ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ನಿಯೋಗ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಮೂರು ಸ್ಥಾನಗಳ ವಿಧಾನಸಭಾ ಉಪಚುನಾವಣೆಗೆ ಮುನ್ನ ಮತದಾರರ ಮೇಲೆ ಪ್ರಭಾವ ಬೀರಲು "ಪೂರ್ಣ ಪುಟ ಜಾಹೀರಾತು" ನೀಡುವ ಮೂಲಕ ರಾಜ್ಯ ಸರ್ಕಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಬಿಜೆಪಿ ನಿಯೋಗ ಆರೋಪಿಸಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ವಿಜಯೇಂದ್ರ ಯಡಿಯೂರಪ್ಪ, ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ತಮ್ಮ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಲು ತುಕಾರಾಮ್ ಅವರು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ಹರಿದು ಬಂದಿರುವ ಹಣವನ್ನು ಬಳಸಿದ್ದಾರೆ. ಆದ್ದರಿಂದ ತುಕಾರಾಂ ಅನರ್ಹಗೊಳಿಸಬೇಕು ಎಂದು ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ
ಕೆವಿಎಸ್‌ಟಿಡಿಸಿ ಲಿಮಿಟೆಡ್‌ನಿಂದ 187 ಕೋಟಿ ರೂ.ಗಳನ್ನು ಕಬಳಿಸಲಾಗಿದೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಮತ್ತು ಇತರೆಡೆ ಕಾಂಗ್ರೆಸ್ ಬಳಸಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯದ ತನಿಖೆಯ ಫಲಿತಾಂಶಗಳನ್ನು ಉಲ್ಲೇಖಿಸಿ ಅವರು ಸುದ್ದಿಗಾರರಿಗೆ "ಈ ಅಕ್ರಮ ಬಹಿರಂಗವಾಗಿದೆ" ಎಂದು ಹೇಳಿದ್ದಾರೆ.
"ನಾವು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಚುನಾಯಿತ ಸಂಸದ ಇ ತುಕಾರಾಂ ಅವರು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ವೆಚ್ಚದ ಮಿತಿಯನ್ನು ಮೀರಿದ್ದಾರೆ, ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಅನರ್ಹಗೊಳಿಸುವಂತೆ ನಾವು ಚುನಾವಣಾ ಆಯೋಗವನ್ನು ವಿನಂತಿಸಿದ್ದೇವೆ" ಎಂದು ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣ ಪುಟದ ಜಾಹೀರಾತುಗಳನ್ನು ನೀಡುವ ಮೂಲಕ "ಸುಳ್ಳು" ಹೇಳಿಕೆಗಳನ್ನು ನೀಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
Advertisement