
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂದು ನನಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಗ್ರಹಿಸಿದ್ದಾರೆ.
ಮುಡಾ ಕಡತಗಳನ್ನು ಸಚಿವ ಭೈರತಿ ಸುರೇಶ್ ಅವರು ಸುಟ್ಟುಹಾಕಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಆರೋಪಿಸಿದ್ದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಭೈರತಿ ಸುರೇಶ್, ‘ಯಡಿಯೂರಪ್ಪ ಒಳ್ಳೆಯವರು. ಆದರೆ ಅವರ ಪತ್ನಿ ಮೈತ್ರಾದೇವಿ ಅವರ ಸಾವು ಹೇಗಾಯಿತು.
ಅವರ ಸಾವಿನ ವಿಚಾರದಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂದು ನನಗೆ ಅನುಮಾನವಿದೆ. ಈ ಬಗ್ಗೆ ಗೃಹ ಸಚಿವರು, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿ’ ಎಂದರು.
ಅಂತೆಯೇ ‘ಒಬ್ಬ ಕೇಂದ್ರ ಸಚಿವೆಯಾಗಿ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಅವರನ್ನೂ ಬಂಧಿಸಿ, ತನಿಖೆ ನಡೆಸಿದರೆ ಯಡಿಯೂರಪ್ಪ ಅವರ ಪತ್ನಿಯ ಸಾವು ಹೇಗಾಯಿತು ಎಂಬುದು ಗೊತ್ತಾಗುತ್ತದೆ ಎಂದು ನಾನು ಒತ್ತಾಯಿಸಿದರೆ, ಶೋಭಾ ಅದನ್ನು ಒಪ್ಪುತ್ತಾರೆಯೇ’ ಎಂದು ಪ್ರಶ್ನಿಸಿದರು.
ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್ ಕಾರಣ ಎಂದ ಶೋಭಾ ಕರಂದ್ಲಾಜೆ
ಇನ್ನು ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸಚಿವ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಆ ಮಾತನ್ನು ಹೇಳಲಾ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದು, ಭೈರತಿ ಸುರೇಶ್ ದರೋಡೆಕೋರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹಾಳು ಮಾಡಿದವರು. ಅವರನ್ನು ಹೆಬ್ಬಾಳದಿಂದ ಓಡಿಸುತ್ತೇವೆ ಎಂದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದ ಬಿವೈ ವಿಜಯೇಂದ್ರ
ಇನ್ನು ಭೈರತಿ ಸುರೇಶ್ ಮಾತಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ.
ಮಿಸ್ಟರ್ ಬೈರತಿ ಸುರೇಶ್ ಅವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಹಾಗೂ ನಿಮ್ಮ ಮುಖ್ಯಮಂತ್ರಿಗೇ ಸಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement