
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಇಂದು ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರು ದಕ್ಷಿಣ ಸಮೀಪದ ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಫಯಾಜಾಬಾದ್‌ನಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ.
ಮಳೆಯಿಂದಾಗಿ ಚರಂಡಿಯ ಗಲೀಜು ನೀರು ಮನೆಗಳಿಗೆ ನುಗ್ಗಿ ಜೀವನ ದುಸ್ತರವಾಗಿದೆ. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಗೆ ಈ ಹಿಂದೆ ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಭಾರೀ ಮಳೆಯಾಗಿದೆ. ಇದರ ಪರಿಣಾಮವಾಗಿ ರಸ್ತೆಗಳಲ್ಲಿ ನೀರು ತುಂಬಿ ಸುಮಾರು 100 ಮನೆಗಳಿಗೆ ನೀರು ನುಗ್ಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುಲಾಬ್ ಪಾಷಾ ಹೇಳಿದರು. 15 ರಿಂದ 20 ನಿಮಿಷಗಳ ಕಾಲ ಮಳೆಯಾದರೂ ಸಾಕು, ಇಡೀ ಪ್ರದೇಶವು ಜಲಾವೃತವಾಗುತ್ತದೆ. ಕಳೆದ 12 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮಳೆಗಾಲದಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿ ದುರ್ವಾಸನೆ ಬೀರುತ್ತಿದ್ದು, ಮಕ್ಕಳು ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದರು.
ಏತನ್ಮಧ್ಯೆ, ಬೆಂಗಳೂರಿನ ತುದಿಯಲ್ಲಿರುವ ಸಾಯಿಬಾಬಾ ಲೇಔಟ್‌ನ ಮೇಲ್ಭಾಗದ ಪ್ರದೇಶ ಮಳೆಯಿಂದಾಗಿ ಮತ್ತೆ ಜಲಾವೃತವಾಗಿದೆ. ಸ್ಥಳೀಯ ಶಾಸಕ ಬೈರತಿ ಬಸವರಾಜ್ ಅವರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಕೂಡ ಭೇಟಿ ನೀಡಿದ್ದಾರೆ. ರೈಲ್ವೇ ಸೇತುವೆಯಡಿ ಹೆಚ್ಚುವರಿ ವೆಂಟ್ ಕಾಮಗಾರಿ ನಡೆಯುತ್ತಿದ್ದು, ಬೇಸಿಗೆ ವೇಳೆಗೆ ಪೂರ್ಣಗೊಳ್ಳಲಿದ್ದು, ಕೆಲ ತಿಂಗಳುಗಳ ಕಾಲ ಸದ್ಯದ ಪರಿಸ್ಥಿತಿ ಮುಂದುವರೆಯುತ್ತದೆ ಎಂದರು.
ಇನ್ನು ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ 35.50 ಮಿ.ಮೀ, ದೊರೆಸಾನಿಪಾಳ್ಯ 34.50 ಮಿ.ಮೀ, ಪುಲಕೇಶಿನಗರ 30 ಮಿ.ಮೀ, ಬೊಮ್ಮನಹಳ್ಳಿ 30.50 ಮಿ.ಮೀ, ಅರೆಕೆರೆ 24.50 ಮಿ.ಮೀ ಮಳೆ ಸಂಜೆ 4 ರಿಂದ 4:40 ರವರೆಗೆ ದಾಖಲಾಗಿದೆ.
Advertisement