
ಮೈಸೂರು: ಈ ಹಿಂದೆ ದಸರಾ ವೇಳೆ ಮೈಸೂರು ಅರಮನೆ ಆವರಣದಲ್ಲೇ ಕಾದಾಟಕ್ಕೆ ಇಳಿದಿದ್ದ ಧನಂಜಯ ಮತ್ತು ಕಂಜನ್ ಆನೆಗಳು ಮತ್ತೆ ಸಂಘರ್ಷದ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದೆ.
ಈ ಬಾರಿಯೂ ಧನಂಜಯ ಆನೆ ಮತ್ತೆ ಕಂಜನ್ ಆನೆ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಥಳದಲ್ಲಿದ್ದ ಮಾವುತರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಪ್ರಸ್ತುತ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿರುವ ಧನಂಜಯ ಮತ್ತು ಕಂಜನ್ ಆನೆಗಳು ನಿನ್ನೆ ಪರಸ್ಪರ ಕಾದಾಡಿಕೊಂಡಿವೆ.
ಸ್ಥಳೀಯರ ಪ್ರಕಾರ ಕಂಜನ್ ಆನೆ ಸುಮ್ಮನೆ ನಿಂತಿದ್ದ ವೇಳೆ ಏಕಾಏಕಿ ಧನಂಜಯ ಆನೆ ಕಂಜನ್ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಆನೆ ಕೊಂಚ ಮುಂದೆ ಓಡಿದ್ದು ಆಗಲೂ ಬಿಡದ ಧನಂಜಯ ಆನೆ ಆದರ ಹಿಂಭಾಗದ ಮೇಲೆ ದಾಳಿ ಮಾಡಿದೆ.
ಈ ವೇಳೆ ಸ್ಥಳದಲ್ಲೇ ಇದ್ದ ಮಾವುತರು ಧನಂಜಯ ಆನೆಯನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದು ಬಳಿಕ ಆನೆಗಳು ತಮ್ಮ ತಮ್ಮ ಜಾಗದಲ್ಲಿ ಬಂದು ನಿಂತಿವೆ. ಇನ್ನು ಘಟನೆಯಲ್ಲಿ ಕಂಜನ್ ಆನೆಗೆ ಯಾವುದೇ ಗಂಭೀರ ಪೆಟ್ಟುಗಳಾಗಿಲ್ಲ ಎಂದು ಮಾವುತರು ಸ್ಪಷ್ಟಪಡಿಸಿದ್ದಾರೆ.
ಈ ಕಾದಾಟದ ಬಳಿಕ ಎರಡೂ ಆನೆಗಳನ್ನು ವೈದ್ಯರು ಪರೀಕ್ಷೆ ನಡೆಸಿದ್ದು ಎರಡೂ ಆನೆಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಕಂಜನ್ ಆನೆ ಮೇಲೆ ಸತತ ದಾಳಿ
ಇನ್ನು ಧನಂಜಯ ಆನೆ ಕಂಜನ್ ಆನೆ ಮೇಲೆ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದಸರಾ ಸಂದರ್ಭದಲ್ಲೂ ಧನಂಜಯ ಆನೆ ಕಂಜನ್ ಮೇಲೆ ದಾಳಿ ಮಾಡಿತ್ತು. ಮೈಸೂರು ಅರಮನೆ ಆವರಣದಲ್ಲೇ ಕಂಜನ್ ಆನೆಯನ್ನು ಅಟ್ಟಾಡಿಸಿದ್ದ ಧನಂಜಯ ಆನೆ ದಾಳಿ ಮಾಡಿತ್ತು. ಈ ವೇಳೆ ರಸ್ತೆಗೆ ಓಡಿ ಹೋಗಿದ್ದ ಕಂಜನ್ ಆನೆಯನ್ನು ಬಳಿಕ ಅರಮನೆ ಆವರಣಕ್ಕೆ ಮಾವುತರು ಕರೆತಂದಿದ್ದರು.
Advertisement