
ಬೆಂಗಳೂರು: ಭಾರೀ ಮಳೆಯ ಮಧ್ಯೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಳೆ ನೀರಿನಿಂದ ತುಂಬಿದ 5 ಅಡಿ ಆಳದ ತೆರೆದ ಲಿಫ್ಟ್ ಶಾಫ್ಟ್‌ನಲ್ಲಿ ಮುಳುಗಿ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಬಾಲಕನನ್ನು ಕನ್ನಮಂಗಲ ನಿವಾಸಿ 2ನೇ ತರಗತಿಯಲ್ಲಿ ಓದುತ್ತಿರುವ ಸುಹಾಸ್ ಗೌಡ ಎಂದು ಗುರುತಿಸಲಾಗಿದೆ.
ನಡೆದ ಘಟನೆಯೇನು?: ನಿನ್ನೆ ಬುಧವಾರ ಬೆಳಗ್ಗೆ 9:15 ರ ಸುಮಾರಿಗೆ ಸುಹಾಸ್ ತನ್ನ ಸ್ನೇಹಿತರೊಂದಿಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಆಟವಾಡುತ್ತಿದ್ದನು. ಕಟ್ಟಡದ ನೆಲ ಅಂತಸ್ತಿನ ಒಳಗೆ ಹೋಗಿದ್ದಾಗ ಲಿಫ್ಟ್ ಗಾಗಿ ಅಗೆದಿದ್ದ ಜಾಗದಲ್ಲಿ ಬಿದ್ದಿದ್ದಾನೆ. ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಲಿಫ್ಟ್‌ಗಾಗಿ 5 ಅಡಿ ಆಳದ ತೆರೆದ ಜಾಗದಲ್ಲಿ ನೀರು ತುಂಬಿದ್ದು, ಸುಹಾಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸ್ನೇಹಿತ ಬಿದ್ದದ್ದು ನೋಡಿ, ಅವನ ಇಬ್ಬರು ಸ್ನೇಹಿತರು ಹತ್ತಿರದ ನಿವಾಸಿಗಳಿಗೆ ತಿಳಿಸಿದ್ದಾರೆ. ಅವರು ಅವನನ್ನು ಹೊರಗೆಳೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ಅಷ್ಟರಲ್ಲಾಗಲೆ ಮಗು ಮೃತಪಟ್ಟಿದೆ ಎಂದು ಹೇಳಿದರು. ಹಾಲಿನ ಡೈರಿಗಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಡೈರಿ ಅಧ್ಯಕ್ಷ ಸಣ್ಣಪ್ಪ ಮತ್ತು ಅನಿಲ್ ವಿರುದ್ಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಹಾಸ್‌ನ ತಾಯಿ, ಸೂಕ್ತ ಮುಂಜಾಗ್ರತಾ ಕ್ರಮಗಳು ಮತ್ತು ಭದ್ರತೆ ಇದ್ದಿದ್ದರೆ ತನ್ನ ಮಗನನ್ನು ಉಳಿಸಬಹುದಿತ್ತು. ಮಗನನ್ನು ಕಳೆದುಕೊಂಡಿರುವ ನನ್ನ ಜೊತೆ ಈಗ ತಾಯಿ ಮಾತ್ರ ಇದ್ದಾರೆ ಎಂದರು. ಅಕ್ಕಪಕ್ಕದ ಮನೆಯವರು ನಿರ್ಲಕ್ಷ್ಯದಿಂದ ಬಾಲಕನ ಪ್ರಾಣ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಶ್ರೀಕನ್ಯಾ ಬಾಲಕ ಸುಹಾಸ್ ತಾಯಿ ಮನೆಕೆಲಸ ಮಾಡುತ್ತಿದ್ದು, ಪತಿಯಿಂದ ಬೇರ್ಪಟ್ಟು ಜೀವನ ನಡೆಸುತ್ತಿದ್ದರು.
ನಿರ್ಮಾಣ ಹಂತದಲ್ಲಿರುವ ಕಟ್ಟಡವು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಭಾಗವಾಗಿರುವ ಕನ್ನಮಂಗಲ ಮಿಲ್ಕ್ ಡೈರಿ ಅಸೋಸಿಯೇಷನ್‌ಗೆ ಸೇರಿದೆ.
Advertisement