ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ರ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕೋರ್ಟ್ ನಾಳೆಗೆ ಕಾಯ್ದಿರಿಸಿದೆ.
ನಟ ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದು ಮಾಡಿ ಜಾಮೀನು ಕೇಳಲಾಗಿದ್ದು, ಈ ಸಂಬಂಧ ಹಿರಿಯ ವಕೀಲ ಸಿವಿ ನಾಗೇಶ್ ಇಂದು ಕೋರ್ಟ್ ನಲ್ಲಿ ತಮ್ಮ ವಾದ ಮಂಡಿಸಿದರು. 'ದರ್ಶನ್ಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವಾದಿಸಿದರು.
ʼಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ಮರಗಟ್ಟುವಿಕೆ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಬಹುದು. ವೈದ್ಯಕೀಯ ವರದಿಯೂ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದೆ. ಹಾಗಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದಿದ್ದಾರೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀನು ನೀಡಬೇಕುʼ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ದರ್ಶನ್ ಜಾಮೀನು ಅರ್ಜಿಗೆ ಕೆಲ ತಕರಾರುಗಳನ್ನು ಎತ್ತಿದರು. 'ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಲೂಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೇ ಎಂದರು. ಈ ವೇಳೆ ನ್ಯಾಯಪೀಠ, ಏನು ನಿಮ್ಮ ಮಾತಿನ ಅರ್ಥ? ಅರ್ಜಿದಾರರು ಅನಾರೋಗ್ಯದ ಅಂತಿಮ ಹಂತಕ್ಕೆ ತಲುಪುವವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತ್ತು.
ವಾದ-ಪತ್ರಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ತೀರ್ಪನ್ನು ನಾಳೆಗೆ(ಬುಧವಾರ) ಪ್ರಕಟಿಸುವುದಾಗಿ ಹೇಳಿದೆ.
ಅಂದಹಾಗೆ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಆಪ್ತೆ ಪವಿತ್ರಾಗೌಡ ಹಾಗೂ ಇಬ್ಬರು ಸಹಚರರ ಜಾಮೀನು ಅರ್ಜಿಯನ್ನು ಅ.14 ರಂದು 57ನೇ ಸಿಸಿಹೆಚ್ ನ್ಯಾಯಾಲಯವು ವಜಾಗೊಳಿಸಿತ್ತು.
Advertisement