ಚಿಕ್ಕಮಗಳೂರು: ಎತ್ತಿನಭುಜ ಆರಣ್ಯದಲ್ಲಿ ನಡೆದಿದೆ ಎಂದು ಹೇಳಲಾದ ಕಾರುಗಳ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಮೂಡಿಗೆರೆಯಲ್ಲಿ ನಡೆದ ಫೋರ್ ವೀಲ್ ರ್ಯಾಲಿ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮಸ್ತಿಗಲ್ಲ ಎಂದು ಕಿಡಿಕಾರಿರುವ ಸಚಿವರು, ಸಿಸಿಎಫ್ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಮತ್ತು ಅರಣ್ಯ, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲ್ಪಟ್ಟಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಶ್ಚಿಮಘಟ್ಟ ಸಾಲಿನಲ್ಲಿ ನೂರಾರು ಜೀಪುಗಳೊಂದಿಗೆ ಇಂದು(ಶನಿವಾರ) ಆಫ್ ರೋಡ್ ಇವೆಂಟ್ ನಡೆದಿತ್ತು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಭೈರಾಪುರ-ಹೊಸಕೆರೆಯಲ್ಲಿ ಜೀಪ್ ರ್ಯಾಲಿ ನಡೆದಿತ್ತು. ಆನೆ ಕಾರಿಡಾರ್ ವ್ಯಾಪ್ತಿಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ರ್ಯಾಲಿ ನಡೆದಿತ್ತು. ಸುಮಾರು 80ಕ್ಕೂ ಹೆಚ್ಚು ಜೀಪ್ ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ನೂರಾರು ಜೀಪುಗಳು, ಜಿಪ್ಪಿಗಳು ಮೂಡಿಗೆರೆ ತಾಲೂಕಿನ ಹೇರಿಕೆ ಸಮೀಪದ ಲಕ್ಷ್ಮೀ ಸರಸ್ವತಿ ಎಸ್ಟೇಟ್ ಭಾಗದಲ್ಲಿ ಆಫ್ ರೋಡ್ ಈವೆಂಟ್ ನಡೆಸಿದ್ದು ಕೆಲವು ಕಡೆ ಮೀಸಲು ಅರಣ್ಯ ಭಾಗದಲ್ಲಿಯೂ ಜೀಪುಗಳು ಓಡಾಟ ಕಂಡು ಬಂದಿದೆ.
ಇದರ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಕಾಡಾನೆಗಳ ಆವಾಸಸ್ಥಾನವಾಗಿದೆ. ಜೊತೆಗೆ ವಿವಿಧ ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಏಕಕಾಲದಲ್ಲಿ ನೂರಾರು ವಾಹನಗಳು ಓಡಾಡುವುದರಿಂದ ಇಲ್ಲಿನ ಪರಿಸರದಲ್ಲಿ ಕಾಡಾನೆಗಳು ಭಯಭೀತರಾಗಿ ಗ್ರಾಮದ ಕಡೆ ಬರುವ ಸಾಧ್ಯತೆ ಹೆಚ್ಚಿದ್ದು ಜೊತೆಗೆ ಬೆಟ್ಟದ ಸವಕಳಿಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಿಗಳ ಸಾವು
ಇದೇ ವೇಳೆ ಐದು ವರ್ಷಗಳಲ್ಲಿ ಅಕ್ರಮ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಹಾಗೂ ಬೇಲಿ ಉರುಳಿಗೆ ಸಿಲುಕಿ ಎಷ್ಟು ವನ್ಯಜೀವಿಗಳು ಮೃತಪಟ್ಟಿವೆ ಎಂಬ ವಲಯವಾರು ವರದಿಯನ್ನು 10 ದಿನಗಳಲ್ಲಿ ಸಲ್ಲಿಸಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವನ್ಯಜೀವಿಗಳು ಮೃತಪಟ್ಟ ಪ್ರಕರಣಗಳ ಕುರಿತು ಕೈಗೊಂಡಿರುವ ಕ್ರಮವೇನು? ಈ ಪ್ರಕ್ರಿಯೆ ಯಾವ ಹಂತದಲ್ಲಿದೆ. ಎಷ್ಟು ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂಬ ಸಮಗ್ರ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಅರಣ್ಯದಂಚಿನಲ್ಲಿರುವ ತೋಟಗಳಲ್ಲಿ ಅನಿಧಿಕೃತವಾಗಿ ಅಳವಡಿಸಲಾಗಿರುವ ವಿದ್ಯುತ್ ತಂತಿಬೇಲಿ ಸ್ಪರ್ಶದಿಂದ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳು ಮೃತಪಡುತ್ತಿದ್ದು, ವನ್ಯಜೀವಿಗಳು ಸ್ವಾಭಾವಿಕ ಅಥವಾ ಅಸಹಜವಾಗಿ ಮೃತಪಟ್ಟ ಸಂದರ್ಭದಲ್ಲಿ ಕೂಡಲೇ ಮರಣೋತ್ತರ ಪರೀಕ್ಷೆ ಹಾಗೂ ಆಡಿಟ್ ಮಾಡಿ ನಿಖರ ವರದಿಯನ್ನು ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
Advertisement