ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದು, ಈ ನಡುವಲ್ಲೇ ಸ್ಪಷ್ಟನೆ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಯಾವುದೇ ಮನವಿ ಪತ್ರಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ.
ರಾಜ್ಯಪಾಲರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ರಾಜ್ಯಪಾಲರ ಬಳಿ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಆದರೆ, ರಾಜ್ಯಪಾಲರು ಏಕೆ ಹೀಗೆ ಹೇಳುತ್ತಿದ್ದಾರೆಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು. ಇದು ನಿಜವೋ,ಸುಳ್ಳೋ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಚಿವರು ಧರಣಿ ನಡೆಸಿ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರಾಜಭವನ ಚಲೋ ನಡೆಸಿದರು. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿರಲಿಲ್ಲ.
ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತನಿಖಾ ಸಂಸ್ಥೆಗಳು ಗೆಹ್ಲೋಟ್ ಅವರನ್ನು ಸಾಕಷ್ಟು ಸಮಯದ ಹಿಂದೆ ಸಂಪರ್ಕಿಸಿದ್ದವು. ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ನಾವು ಅದನ್ನು ಪರಿಶೀಲನೆ ನಡೆಸುತ್ತೇನೆ. ಇದೀಗ ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ನಾವು ರಾಜ್ಯದ ಜನರ ಕಲ್ಯಾಣಕ್ಕಾಗಿ ಹೋರಾಡುತ್ತಿದ್ದೇವೆ. ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ ನೀಡುವುದು ಬಿಟ್ಟು ರಾಜ್ಯಪಾಲರಿಗೆ ಬೇರೆ ಮಾರ್ಗವಿಲ್ಲ ಎಂದು ತಿಳಿಸಿದರು.
ಮುಡಾ ಹಗರಣ ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿದ್ದು, ನ್ಯಾಯಾಲಯದ ತೀರ್ಪಿನ ನಂತರ ಪ್ರತಿಕ್ರಿಯೆ ನೀಡುತ್ತೇತವೆ. ಇದೀಗ ನಾಲ್ವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದೇವೆ. ಅಲ್ಲದೆ, ಸಿಎಂ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು ಹಾಗೂ ಟಿಜೆ ಅಬ್ರಹಾಂ ಅವರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ.
ತನಿಖೆಯನ್ನು ಪೂರ್ಣಗೊಳಿಸಿದ ಲೋಕಾಯುಕ್ತ ಎಸ್‌ಐಟಿ ನಾಲ್ವರ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾಯ್ದೆ, 197 ಸಿಪಿಸಿ ಕಾಯ್ದೆಯ ಸೆಕ್ಷನ್ 17 ಎ ಅಡಿಯಲ್ಲಿ ಪ್ರಾಸಿಕ್ಯೂಷನ್'ಗೆ ಅನುಮತಿ ಕೇಳಿದೆ, ಆದರೆ, ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ. ಯಾರೋ ಮನವಿ ಸಲ್ಲಿಸಿದ ಒಂದೇ ದಿನದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಪಾಲರು ಸಾರ್ವಜನಿಕ ಜೀವನದಲ್ಲಿದ್ದು, ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು ಪಕ್ಷದ ಪ್ರತಿನಿಧಿಯಾಗಿ ಅಲ್ಲ. ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
Advertisement