ಬೆಂಗಳೂರು: ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರಂದು ನಗರದಾದ್ಯಂತ ಸ್ವಚ್ಚತಾ ಅಭಿಯಾನ ಆಯೋಜಿಸಲಾಗುತ್ತಿದ್ದು, ಒಂದು ಸಾವಿರ ಶಾಲಾ ಮಕ್ಕಳು ಆನ್ ಲೈನ್ ಮೂಲಕ ಪ್ರತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಅಕ್ಟೋಬರ್ 2 ರಂದು 1 ಸಾವಿರ ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸ್ವಚ್ಛ ಬೆಂಗಳೂರು ಪ್ರತಿಜ್ಞಾ ವಿಧಿ ಬೋಧಿಸಲಾಗುವುದು ಎಂದರು.
ನಗರದ ಗುಂಡಿಗಳ ಪರಿಸ್ಥಿತಿ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಗುರುತಿಸಲಾದ 2,795 ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಖ್ಯವಾಗಿ ಪ್ರಮುಖ ರಸ್ತೆಗಳಲ್ಲಿ ಕಡಿಮೆ ಗಮನ ಹರಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಮಳೆಯಿಂದಾಗಿ ನಾವು ಕಡಿಮೆ ತೊಂದರೆ ಎದುರಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್ ಸೆ. 6ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾಗಲಿದ್ದು, ಪಕ್ಷದ ಎಲ್ಲ ಮುಖಂಡರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
Advertisement