
ಬೆಂಗಳೂರು: ತುಮಕೂರು ಜಿಲ್ಲೆಯ ತಿಪಟೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) 60x40 ಚದರ ಅಡಿ ಅಳತೆಯ ಕಾರ್ನರ್ ಸೈಟ್‌ಗೆ 72 ಕೋಟಿ ರೂ.ಗೆ ಬಿಡ್ ಮಾಡಿ ಸುದ್ದಿಯಾಗಿದ್ದರು.
ಎರಡು ವರ್ಷಗಳ ಹಿಂದೆ ಸೈಟ್‌ನ ಮಾರುಕಟ್ಟೆ ಮೌಲ್ಯವು ಕೇವಲ 6 ಕೋಟಿ ರೂ.ಗಳಾಗಿದ್ದು, ಅದರ ನಿಜವಾದ ಮೌಲ್ಯಕ್ಕಿಂತ ಶೇ. 1,270 ರಷ್ಟು ಹೆಚ್ಚು ಬಿಡ್ ಆಗಿತ್ತು ಮತ್ತು ಇದು ಬಿಡಿಎ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ಬಿಡ್ ಆಗಿತ್ತು.
ಆದರೆ ಬಿಡ್ಡರ್ ಟಿಸಿ ಶಶಾಂಕ್ ಪಟೇಲ್ ಅವರು 72 ಗಂಟೆಗಳ ಒಳಗೆ ಮೊತ್ತದ ನಾಲ್ಕನೇ ಒಂದು ಭಾಗ(ಬಿಡ್ ನ ಶೇ. 25 ರಷ್ಟು ಹಣ)ವನ್ನು ಪಾವತಿಸಲು ವಿಫಲವಾದ ಕಾರಣ ಬಿಡಿಎ ಅವರ ಸೈಟ್ ಹಂಚಿಕೆಯನ್ನು ರದ್ದುಗೊಳಿಸಿತ್ತು.
ಪಟೇಲ್ ಅವರು ತಾವು ತಪ್ಪಾಗಿ ಬಿಡ್ ಮಾಡಿದ್ದು, ಮೊತ್ತವು ಸಂಪೂರ್ಣ ಸೈಟ್‌ಗೆ ಎಂದು ಭಾವಿಸಿದ್ದೆ. ಅದು ಪ್ರತಿ ಚದರ ಮೀಟರ್‌ಗೆ ಎಂಬುದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ಅವರು ಆರ್‌ಟಿಐ ಅರ್ಜಿ ಮೂಲಕ ಬಿಡಿಎ ವಿರುದ್ಧ ಹರಿಹಾಯ್ದಿದ್ದು, ಬಿಡ್ ಮಾಡಲು ತಾನು ಪಾವತಿಸಿದ 4 ಲಕ್ಷ ರೂ. ಠೇವಣಿ ಮೊತ್ತವನ್ನು ವಾಪಸ್ ನೀಡುವಂತೆ ಕೇಳಿಕೊಂಡಿದ್ದಾರೆ.
ಪಟೇಲ್ ಅವರು ಬಿಡ್ ಮಾಡಿದ್ದ ಎಚ್‌ಎಸ್‌ಆರ್ ಲೇಔಟ್ 4ನೇ ಸೆಕ್ಟರ್‌ನಲ್ಲಿರುವ ನಿವೇಶನವನ್ನು(ಸರ್ವೆ ನಂ. 276) ಅಂತಿಮವಾಗಿ ಈ ವರ್ಷದ ಆರಂಭದಲ್ಲಿ 10.57 ಕೋಟಿ ರೂ.ಗೆ ಮತ್ತೊಬ್ಬ ಬಿಡ್‌ದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 4, 2022 ರಂದು ಪ್ರಾರಂಭವಾದ ಇ-ಹರಾಜಿನಲ್ಲಿ ಬಿಡಿಎ ಈ ಸೈಟ್‌ಗೆ ಪ್ರತಿ ಚದರ ಮೀಟರ್‌ಗೆ ರೂ 1,50,000 ಕನಿಷ್ಠ ಬಿಡ್ ಬೆಲೆಯನ್ನು ನಿಗದಿಪಡಿಸಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಲಭ್ಯವಾದ ದಾಖಲೆಗಳಿಂದ ಬಹಿರಂಗವಾಗಿದೆ.
ಬಿಡ್ ನಲ್ಲಿ ಭಾಗವಹಿಸಿದ್ದ ಪಟೇಲ್ ಅವರು, ಮಾರ್ಚ್ 4 ರಂದು ಪ್ರತಿ ಚದರ ಮೀಟರ್‌ಗೆ 2,01,500 ರೂ. ನಿಂದ ಬಿಡ್ ಅನ್ನು ಪ್ರಾರಂಭಿಸಿದರು ಮತ್ತು ಮಾರ್ಚ್ 9 ರ ವೇಳೆಗೆ 20,55,500 ರೂ.ಗೆ ತಲುಪುವವರೆಗೂ ಮೊತ್ತವನ್ನು ಹೆಚ್ಚಿಸುತ್ತಲೇ ಇದ್ದರು. ಇದು ಇ-ಹರಾಜು ಆಗಿದ್ದರಿಂದ ಅಂತಿವಾಗಿ ಪ್ರತಿ ಚದರ ಮೀಟರ್‌ಗೆ 20,55,500 ರೂ.ಗೆ, ಅಂದರೆ 72 ಕೋಟಿಗೆ ಸೈಟ್ ಸ್ವಯಂಚಾಲಿತವಾಗಿ ಅವರಿಗೆ ಹಂಚಲಾಗಿತ್ತು” ಎಂದು ಮೂಲಗಳು ವಿವರಿಸಿವೆ.
ಈ ಸೈಟ್‌ಗಾಗಿ 4 ಲಕ್ಷ ರೂಪಾಯಿ ಅರ್ನೆಸ್ಟ್ ಮನಿ ಡೆಪಾಸಿಟ್(EMD) ಪಾವತಿಸಬೇಕಾಗಿತ್ತು. ವಿಫಲವಾದ ಬಿಡ್ ದಾರರಿಗೆ ಇಎಮ್‌ಡಿ ಸ್ವಯಂಚಾಲಿತವಾಗಿ ಮರುಪಾವತಿಯಾಗುತ್ತದೆ. ಆದರೆ ಯಶಸ್ವಿ ಬಿಡ್‌ದಾರರಿಗೆ ಬಿಡ್ ಮಾಡಿದ ಒಟ್ಟು ಮೊತ್ತಕ್ಕೆ ಸರಿಹೊಂದಿಸಲಾಗುತ್ತದೆ.
ಕಾರ್ನರ್ ಸೈಟ್ ಆಕ್ಟ್ 1984 ರ ವಿತರಣೆಯ ಪ್ರಕಾರ, ಯಶಸ್ವಿ ಬಿಡ್ ದಾರರು ಒಟ್ಟು ಮೊತ್ತದ ಶೇ 25 ರಷ್ಟು ಹಣವನ್ನು 72 ಗಂಟೆಗಳ ಒಳಗೆ ಪಾವತಿಸಬೇಕು ಮತ್ತು ಉಳಿದ ಹಣವನ್ನು 210 ದಿನಗಳಲ್ಲಿ ಶೇ. 18 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.
ಪಟೇಲ್ ಅವರು ಬಿಡಿಎ ನೀಡಿದ್ದ ಮೂರು ದಿನಗಳಲ್ಲಿ ಮೊತ್ತದ ನಾಲ್ಕನೇ ಒಂದು ಭಾಗವನ್ನು ಪಾವತಿಸಲಿಲ್ಲ. ಹೀಗಾಗಿ ಸೈಟ್ ಹಂಚಿಕೆ ಸ್ವಯಂಚಾಲಿತವಾಗಿ ರದ್ದುಗೊಂಡಿತು ಮತ್ತು ಇಎಂಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. "ಬಿಡಿಎ ನಿಯಮಗಳ ಪ್ರಕಾರ ಈ ಹಣವನ್ನು ಮರುಪಾವತಿಸಲು ಕಾಯಿದೆಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ.
“ಚದರ ಮೀಟರ್ ಲೆಕ್ಕಾಚಾರದ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಒಟ್ಟು ನಿವೇಶನದ ಮೊತ್ತ 20.55 ಲಕ್ಷ ರೂ. ಎಂದು ಮತ್ತು ಬಿಡಿಎ ಸೈಟ್‌ಗಳು ಅಗ್ಗದ ದರದಲ್ಲಿ ಸಿಗುತ್ತವೆ ಎಂದು ನಾನು ಭಾವಿಸಿದ್ದೆ. ನಾನು ಕಷ್ಟಪಟ್ಟು ದುಡಿದ ಹಣ ಇದು. ಅದಕ್ಕಾಗಿಯೇ ನನ್ನ 4 ಲಕ್ಷ ರೂ. ಗಾಗಿ ನಾನು ಪದೇ ಪದೇ ಆರ್‌ಟಿಐ ಅರ್ಜಿಗಳನ್ನು ಕಳುಹಿಸುತ್ತಿದ್ದೇನೆ. ಆದರೆ ಬಿಡಿಎ ಯಾವುದಕ್ಕೂ ಸ್ಪಂದಿಸಿಲ್ಲ. ಮಂಗಳವಾರ ಆರ್‌ಟಿಐ ಆಯುಕ್ತರು ವಿಚಾರಣೆ ನಡೆಸಲಿದ್ದಾರೆ ಎಂದು ಪಟೇಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ.
Advertisement