ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮತ್ತೆ ಮುಂದೂಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ನಿಗದಿ ಮಾಡಲಾಗಿದೆ. ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಇಂದು ಸಹ ಸುದೀರ್ಘ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಸಿಎಂ ಪರ ವಕೀಲರು ಮತ್ತು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್, ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದರು. ನಂತರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಆದರೆ ಈ ವಾರಾಂತ್ಯ ಹಬ್ಬದ ರಜೆಗಳಿವೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದರಿಂದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಸೆಪ್ಟೆಂಬರ್ 12ರಂದು ತಾವು ವಾದಿಸುವುದಾಗಿ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದರು.
ಪ್ರಭಾವ ಬಳಸಿ KIADBಯಿಂದ ಸಿದ್ದಾರ್ಥ ಟ್ರಸ್ಟ್ಗೆ ಸಿಎ ನಿವೇಶನ ಪಡೆದಿದ್ದಾರೆಂಬ ಆರೋಪ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಳಿ ಬಂದಿದ್ದು, ಈ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಕೆಐಎಡಿಬಿ ಸಿಎ ನಿವೇಶನ ಮಾರಾಟ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ದೂರು ನೀಡಿದ್ದರು. ರಾಜ್ಯಪಾಲರ ಸೂಚನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ನದು ಒಂದು ಸಂವಿಧಾನ. ಕಾಂಗ್ರೆಸ್ಗೊಂದು ಸಂವಿಧಾನ ಎಂದು ಟೀಕಿಸಿದ್ದಾರೆ.
384 KAS ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಭಾಷಾಂತರದ ಎಡವಟ್ಟು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಬೆನ್ನಲ್ಲೇ ಮರು ಪರೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ KPSCಗೆ ಸೂಚಿಸಿದ್ದಾರೆ. ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯಲ್ಲಿ ಅಸಮರ್ಪಕ ಕನ್ನಡ ಅನುವಾದದ ಪ್ರಶ್ನೆಗಳ ವರದಿಯ ಹಿನ್ನೆಲೆಯಲ್ಲಿ, ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ KPSCಗೆ ಸೂಚಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಲೋಪಗಳಿಗೆ ಕಾರಣರಾದವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿರುವ ಜಯದೇವ ಆಸ್ಪತ್ರೆ ಭಾನುವಾರದಿಂದ ದಿನದ 24 ಗಂಟೆ ಸೇವೆ ಒದಗಿಸುತ್ತಿದೆ. ಈ ಹಿಂದೆ ಇದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಕಾರ್ಯನಿರ್ವಹಿಸುತಿತ್ತು. ಪ್ರಧಾನ ಜಯದೇವ ಆಸ್ಪತ್ರೆಯ ಸಿಬ್ಬಂದಿಯ ನಿಯೋಜನೆಯೊಂದಿಗೆ ಈಗ 24 ಗಂಟೆಯೂ ಸೇವೆ ಲಭ್ಯವಿರುತ್ತದೆ. ತುರ್ತು ಸೇವೆಗಳನ್ನು ನಿರ್ವಹಿಸಲು ಹೃದ್ರೋಗ ತಜ್ಞರು ಸ್ಯಾಟಲೈಟ್ ಸೆಂಟರ್ ನಲ್ಲಿ ಲಭ್ಯವಿರುತ್ತಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪ್ರಸ್ತುತ ಹೊರ ರೋಗಿಗಳ ಸಮಾಲೋಚನೆ, ತಪಾಸಣೆ ಮತ್ತು ಆಂಜಿಯೋಪ್ಲ್ಯಾಸ್ಟಿಯಂತಹ ಕಾರ್ಯವಿಧಾನಗಳನ್ನು ನಿರಂತರವಾಗಿ ಒದಗಿಸಲಾಗುವುದು, ಈ ಸೇವೆಗಳನ್ನು ಮೀರಿ ಹೆಚ್ಚಿನ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಮುಖ್ಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗುವುದು ಅವರು ತಿಳಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಬಾಂಗ್ಲಾದೇಶದ ಪತ್ರಕರ್ತ ಮತ್ತು ಭಾರತದ ಸುದ್ದಿ ಪೋರ್ಟಲ್‌ನ ಮಹಿಳಾ ಸಿಬ್ಬಂದಿ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನ್ಯೂಸ್ ಪೋರ್ಟಲ್‌ನೊಂದಿಗೆ ಕೆಲಸ ಮಾಡುತ್ತಿರುವ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಮತ್ತು ಅದಿತಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಂಗ್ಲಾದೇಶದ ಪತ್ರಕರ್ತ, ಸೋನಿಯಾ ಗಾಂಧಿ ಅವರನ್ನು ವಿದೇಶಿ ಗೂಢಚಾರಿಕೆ ಸಂಸ್ಥೆಗೆ ಲಿಂಕ್ ಮಾಡುವ ಪೋಸ್ಟ್ ಅನ್ನು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶ್ರೀನಿವಾಸ್ ಜಿ ಆರೋಪಿಸಿದ್ದರು.
Advertisement