ಜೈಲಿನಲ್ಲಿ ನಟ ದರ್ಶನ್'ಗೆ ಬೆನ್ನು ನೋವು: ವೈದ್ಯರ ವರದಿ ಬೆನ್ನಲ್ಲೇ ಸರ್ಜಿಕಲ್ ಚೇರ್ ತಂದುಕೊಟ್ಟ ಅಧಿಕಾರಿಗಳು!

ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಬಿಐಎಂಎಸ್) ವೈದ್ಯರ ತಂಡವು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ವೈದ್ಯರ ವರದಿ ಮೇರೆಗೆ ಅಧಿಕಾರಿಗಳು ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ತಂದುಕೊಟ್ಟಿದ್ದಾರೆ.
ಬಳ್ಳಾರಿ ಜೈಲಿನ ಮುಂದೆ ನಟ ದರ್ಶನ್
ಬಳ್ಳಾರಿ ಜೈಲಿನ ಮುಂದೆ ನಟ ದರ್ಶನ್
Updated on

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್'ಗೆ ಬೆನ್ನುನೋವು ಕಾಡತೊಡಗಿದ್ದು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ವೈದ್ಯರ ತಂಡವು, ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿತು.

ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಬಿಐಎಂಎಸ್) ವೈದ್ಯರ ತಂಡವು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ವೈದ್ಯರ ವರದಿ ಮೇರೆಗೆ ಅಧಿಕಾರಿಗಳು ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ನೀಡಲು ಒಪ್ಪಿಗೆ ನೀಡಿದೆ.

ದರ್ಶನ್​ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ, ಕಾರಾಗೃಹಕ್ಕೆ ಶನಿವಾರ ಉತ್ತರವಲಯದ ಡಿಐಜಿ ಟಿಪಿ‌ ಶೇಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಭೇಟಿ ವೇಳೆ ದರ್ಶನ್​, ತಮಗೆ ಬೆನ್ನೆಲುಬು ಸಮಸ್ಯೆ ಇದೆ. ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇರುವುದರಿಂದ ಶೌಚಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಸರ್ಜಿಕಲ್ ಚೇರ್ ನೀಡುವಂತೆ​ ಡಿಐಜಿ ಬಳಿಕ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಮೆಡಿಕಲ್​ ರೆಕಾರ್ಡ್​ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ. ಆ ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ​ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಹಾಗೆಯೇ ನಿಮಗೂ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದರು.

ಬಳ್ಳಾರಿ ಜೈಲಿನ ಮುಂದೆ ನಟ ದರ್ಶನ್
'ನಮ್ ಬಾಸ್ ಯಾರು? ಚಾಲೆಂಜಿಂಗ್ ಸ್ಟಾರ್, ಅವರು ಯಾವತ್ತಿದ್ರೂ ರಾಜನೇ': ಬಳ್ಳಾರಿ ಜೈಲು ಮುಂದೆ ದರ್ಶನ್ ಅಭಿಮಾನಿಗಳ ಜೈಕಾರ

ಅದರಂತೆ ​ಸೋಮವಾರ ಜೈಲಿಗೆ ಭೇಟಿ ಕೊಟ್ಟ ತಜ್ಞ ವೈದ್ಯರು, ದರ್ಶನ್ ಬೆನ್ನು ಹಾಗೂ ಕೈ ನೋವು ಬಗ್ಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ, ಬಳ್ಳಾರಿ ಜೈಲಿನಲ್ಲಿರುವ ಮೆಡಿಕಲ್ ವರದಿ ಮತ್ತು ಪರಪ್ಪನ ಅಗ್ರಹಾರ ಜೈಲಿನ ಮೆಡಿಕಲ್ ರಿಪೋರ್ಟ್ ತಾಳೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸರ್ಜಿಕಲ್ ಚೇರ್ ಒದಗಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಬಳ್ಳಾರಿ ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್ ಅವರಿಗೆ ಜ್ವರ ಹಾಗೂ ಕೆಮ್ಮು ಇದ್ದು, ವೈದ್ಯರು ಔಷಧಿಗಳನ್ನು ನೀಡಿದ್ದಾರೆ. ಇದನ್ನು ಹೊರತುಪಡಿಸಿದರೆ, ದರ್ಶನ್ ಅವರು ಫಿಟ್ ಆಗಿದ್ದಾರೆಂದು ಘೋಷಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಮೊದಲ ದಿನದಿಂದಲೂ ದರ್ಶನ್ ಯಾರೊಂದಿಗೂ ಮಾತನಾಡುತ್ತಿಲ್ಲ. ದಣಿದ ಹಾಗೂ ಮಾನಸಿಕವಾಗಿ ಕುಗ್ಗಿದಂತೆ ಕಾಣುತ್ತಿದ್ದಾರೆ. ಜೈಲಿನಲ್ಲಿ ಇಂತಹ ವಿಚಾರಗಳು ಸಾಮಾನ್ಯ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ದರ್ಶನ್ ತಮ್ಮೊಂದಿಗೆ ಪುಸ್ತಕಗಳನ್ನು ಇಟ್ಟುಕೊಂಡಿದ್ದು, ತಮ್ಮನ್ನು ಭೇಟಿಯಾಗಲು ಬರುವ ಪತ್ನಿ ವಿಜಯಲಕ್ಷ್ಮೀ ಅವರಿಂದ ಇನ್ನೂ ಕೆಲ ಪುಸ್ತಕಗಳನ್ನು ಪಡೆದಿದ್ದಾರೆ. ಜೈಲಿನಲ್ಲಿರುವ ಬಹುತೇಕ ಸಮಯವನ್ನು ಪುಸ್ತಕಗಳೊಂದಿಗೆ ಕಳೆಯುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com