ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬೆಂಗಳೂರು ಪೊಲೀಸರು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ಕೋರ್ಟ್‌ಗೆ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ 2ನೇ ಆರೋಪಿಯಾಗಿದ್ದರೆ ಪವಿತ್ರಾ 1ನೇ ಆರೋಪಿಯಾಗಿದ್ದಾರೆ. 3 ಪ್ರತ್ಯಕ್ಷ ಸಾಕ್ಷಿಗಳು, FSL ಮತ್ತು CFSLನಿಂದ 8 ವರದಿ, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿವೆ. ಇನ್ನು ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿಗೆ ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಶಾಕ್ ನೀಡಿದ್ದು 6 ಮಂದಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಈ ದೊಡ್ಡ ಬೆಳವಣಿಗೆ ನಡೆದಿದೆ. 13 ಮಂದಿ ಬಿಜೆಪಿ ಸದಸ್ಯರ ಪೈಕಿ 6 ಸದಸ್ಯರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಅದರಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ಗೆ ಬೆಂಬಲ ನೀಡಿದ ಬಿಜೆಪಿ ಸದಸ್ಯರಿಗೆ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನೇ ಕಾಂಗ್ರೆಸ್ ಬಿಟ್ಟು ಕೊಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಂದ ಕಿರಣ್ ಗೌಡರನ್ನು ನಾಮನಿರ್ದೇಶನ ಮಾಡಲಾಗಿದ್ದು, ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬೆಂಬಲಿಸಿದ ಹೀನಾ ಕೌಸರ್ ರನ್ನು ನಾಮನಿರ್ದೇಶನ ಮಾಡಲಾಗಿದೆ. ಇನ್ನು ಬಿಜೆಪಿಯಿಂದ ನಾಮಿನೇಷನ್ ಮಾಡುವವರೇ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮಲಯಾಳ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಕುರಿತು ರಚಿಸಲಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಈ ಕುರಿತಂತೆ ಸಮಿತಿ ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ ನಟ ಸುದೀಪ್, ರಮ್ಯಾ ಸೇರಿದಂತೆ 153 ಮಂದಿ ಸಹಿ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಕುರಿತಂತೆ ಹೋರಾಡಲು 2017ರಲ್ಲಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚಿಸಲಾಗಿತ್ತು. ಈ ಸಂಸ್ಥೆಯ ನಿರ್ದೇಶಕಿ ಕವಿತಾ ಲಂಕೇಶ್ ಆಗಿದ್ದರೆ, ಚೇತನ್ ಅಹಿಂಸಾ ಕಾರ್ಯದರ್ಶಿಯಾಗಿದ್ದಾರೆ.
2024–25ನೇ ಸಾಲಿನ ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲೆಗಳ 20 ಹಾಗೂ ಪ್ರೌಢಶಾಲೆಗಳ 11 ಶಿಕ್ಷಕರನ್ನು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ. ನಾಳೆ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಪದಕದ ಜೊತೆಗೆ 25 ಸಾವಿರ ನಗದು ನೀಡಿ ಗೌರವಿಸಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ಚಿಕ್ಕೋಡಿಯ ಪದ್ಮಶ್ರೀ ಪುರಸ್ಕೃತ ಸುರೇಶ, ಕಲಬುರಗಿಯ ಮಲ್ಲಿಕಾರ್ಜುನ ಎಸ್. ಸಿರಸಿಗಿ, ದಾವಣಗೆರೆಯ ಬಿ. ಅರುಣ್‌ಕುಮಾರ್, ಮೈಸೂರಿನ ಕೆ.ಎಸ್. ಮಧುಸೂದನ್, ಬೆಳಗಾವಿಯ ಅಸ್ಮಾ ಇಸ್ಮಾಯಿಲ್, ದಕ್ಷಿಣ ಕನ್ನಡದ ಕೆ. ಯಮುನಾ, ಹಾವೇರಿಯ ಜಮೀರ್ ಅಬ್ದುಲ್, ಬೆಂಗಳೂರು ದಕ್ಷಿಣದಿಂದ ಜಿ. ರಂಗನಾಥ, ಚಿಕ್ಕಬಳ್ಳಾಪುರ ಸುಶೀಲಮ್ಮ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕರ ಪ್ರಶಸ್ತಿಗೆ ಚಿಕ್ಕಮಗಳೂರಿನ ಆರ್.ಡಿ.ರವೀಂದ್ರ, ಬೆಂಗಳೂರು ಗ್ರಾಮಾಂತರದ ಟಿ.ಕೆ ರವಿಕುಮಾರ್, ಉತ್ತರ ಕನ್ನಡದ ಮಹಾದೇವ ಬೊಮ್ಮಗೌಡ, ಶಿವಮೊಗ್ಗದ ಟಿ. ವೀರೇಶ್ ಆಯ್ಕೆಯಾಗಿದ್ದಾರೆ.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಭೂಅಕ್ರಮ ಆರೋಪ ಮಾಡಿದ್ದು ಪರಿಷತ್ ಸದಸ್ಯ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್‌ನ ಹಲವು ಸದಸ್ಯರು ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ 61 ಪುಟಗಳ ದೂರು ನೀಡಿದ್ದು, ಅಗತ್ಯ ಪುರಾವೆಗಳನ್ನು ಒದಗಿಸಿದ್ದಾರೆ. 2002ರ ನವೆಂಬರ್ 28ರಿಂದ 2004ರ ಮೇ 5ರ ನಡುವೆ ಕರ್ನಾಟಕ ವಸತಿ ಮಂಡಳಿ ನಿರ್ದೇಶಕರಾಗಿದ್ದ ನಾರಾಯಣಸ್ವಾಮಿ ಅವರು ಭೂ ಕಬಳಿಕೆ ಮಾಡಿ ತಾವು ಅಧ್ಯಕ್ಷರಾಗಿರುವ ಆದರ್ಶ ಸೋಶಿಯಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್‌ಗೆ ಬಳಸಿಕೊಂಡಿದ್ದರು. ಆ ಜಾಗದಲ್ಲಿ ಇಂದು ಆನಂದ್ ಧಂ ಬಿರಿಯಾನಿ ಹೋಟೆಲ್ ನಡೆಯುತ್ತಿದೆ. ಈ ಬಗ್ಗೆ ಪ್ರಾಸಿಕ್ಯೂಷನ್ಗೆ ನೀಡುವಂತೆ ಸಲೀಂ ಅಹಮದ್ ಮನವಿ ಮಾಡಿದ್ದಾರೆ.
Advertisement