
ಬೆಂಗಳೂರು: ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಕ್ರಮಗಳಿಂದಾಗಿ ಈ ವರ್ಷ ಮಾರಣಾಂತಿಕ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಈ ವರ್ಷ ಜನವರಿಯಿಂದ ಆಗಸ್ಟ್ ವರೆಗೆ ಹೆದ್ದಾರಿಯಲ್ಲಿ 50 ಮಾರಣಾಂತಿಕ ಅಪಘಾತಗಳು ವರದಿಯಾಗಿವೆ, 2023 ರಲ್ಲಿ ಇದೇ ಅವಧಿಯಲ್ಲಿ 147 ಮಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. 130 ಕಿಲೋ ಮೀಟರ್ ಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದ ಚಾಲಕರ ವಿರುದ್ಧ ಎಫ್ ಐಆರ್ ಬುಕ್ ಮಾಡುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವುದು, ತಂತ್ರಜ್ಞಾನ ಚಾಲಿತ ಸಂಚಾರ ಕಣ್ಗಾವಲು ಅಳವಡಿಸಿರುವುದು ಅಪಘಾತ ಕಡಿಮೆಯಾಗಲು ಕಾರಣವಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್, ಹೆದ್ದಾರಿಯಲ್ಲಿ ಮಾರಣಾಂತಿಕ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೆ, ಹೆದ್ದಾರಿಯಲ್ಲಿ ಪಾದಚಾರಿ ಅಪಘಾತಗಳು ಕಳವಳಕಾರಿ ವಿಷಯವಾಗಿದೆ.
ಹೆದ್ದಾರಿಯನ್ನು ದಾಟಲು ಕೆಲವೇ ಅಂಡರ್‌ಪಾಸ್‌ಗಳಿವೆ. ಫುಟ್ ಓವರ್ ಬ್ರಿಜ್ಡ್ ಗಳಿಲ್ಲ. ಇದು ಪ್ರಯಾಣಿಕರು ಮತ್ತು ಪಾದಚಾರಿಗಳ ಮೇಲೆ ಪರಿಣಾಮ ಬೀರುತ್ತದೆ. ಮದ್ದೂರು, ಚನ್ನಪಟ್ಟಣ, ಬಿಡದಿ ಪಾದಚಾರಿಗಳ ಅಪಘಾತಕ್ಕೆ ತುತ್ತಾಗುವ ತಾಣಗಳಾಗಿದ್ದು, ಇದು ಕಡಿಮೆಯಾಗಬೇಕಿದೆ. ಈ ಜಾಗದಲ್ಲಿ ಫುಟ್ ಓವರ್ ಬ್ರಿಡ್ಜ್ ಇಲ್ಲದ ಕಾರಣ ಸ್ಥಳೀಯರು ಹೆದ್ದಾರಿ ದಾಟಲು ನೋಡುತ್ತಾರೆ ಎಂದರು.
130 ಕಿಮೀ ವೇಗವನ್ನು ದಾಟುವ ಚಾಲಕರ ವಿರುದ್ಧ ಪೊಲೀಸರು ಎಫ್‌ಐಆರ್‌ಗಳನ್ನು ಹಾಕುತ್ತಿರುವುದರಿಂದ ಅತಿಯಾದ ವೇಗದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಈವರೆಗೆ ಚಾಲಕರ ವಿರುದ್ಧ 411 ಎಫ್‌ಐಆರ್‌ಗಳು ದಾಖಲಾಗಿವೆ. ಗಂಟೆಗೆ 100 ಕಿಮೀ ವೇಗವನ್ನು ದಾಟುವವರು ಅತಿವೇಗ ಚಲಾಯಿಸಿದರೆ ಅವರಿಗೆ ಎಸ್ ಎಂಎಸ್ ಬರುತ್ತದೆ. ಎಫ್‌ಐಆರ್ ದಾಖಲಾದ ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ.
ಈ ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಾವು ಆರ್‌ಟಿಒಗೆ ಶಿಫಾರಸು ಮಾಡುತ್ತೇವೆ. ವೇಗದ ಮಿತಿಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಹಳದಿ ಬೋರ್ಡ್ ವಾಹನಗಳ ಪರ್ಮಿಟ್ ನ್ನು ಅಮಾನತುಗೊಳಿಸಲು ಶಿಫಾರಸು ಮಾಡುತ್ತೇವೆ ಎಂದು ಅಲೋಕ್ ಕುಮಾರ್ ಹೇಳುತ್ತಾರೆ.
ಸೆಕ್ಷನಲ್ ಕ್ಯಾಮೆರಾಗಳ ಬಗ್ಗೆ ಜಾಗೃತಿ ಮೂಡಿಸಿದ ನಂತರ, ಕಳೆದ 10 ದಿನಗಳಲ್ಲಿ ಅತಿವೇಗದ ಪ್ರಕರಣಗಳು ಕಡಿಮೆಯಾಗಿದೆ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾದರೆ, ನಾವು ವೇಗದ ಮಿತಿಯನ್ನು ಗಂಟೆಗೆ 120 ಕಿಮೀಗೆ ಹೆಚ್ಚಿಸುತ್ತೇವೆ. ಕಳೆದ ತಿಂಗಳಲ್ಲಿ ವಿವಿಧ ಉಲ್ಲಂಘನೆಗಳಿಗಾಗಿ 1.23 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಸೀಟ್ ಬೆಲ್ಟ್ ಹಾಕಿಕೊಳ್ಳದೆ ವಾಹನ ಚಲಾಯಿಸಿದ್ದಕ್ಕಾಗಿ ಮತ್ತು ಲೇನ್ ಉಲ್ಲಂಘನೆಗಾಗಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
Advertisement