Expressway: ಮೈಸೂರು ರಿಯಲ್ ಎಸ್ಟೇಟ್ ಗೆ ಭಾರೀ ಬೇಡಿಕೆ
ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆಗೊಂಡು ಒಂದು ವರ್ಷವಾಗಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಅವಧಿ 90 ನಿಮಿಷಗಳಿಗೆ ಇಳಿಕೆಯಾಗಿದೆ.
ಪರಿಣಾಮ ಮೈಸೂರು ನಗರ ಇದರ ಲಾಭ ಪಡೆಯುತ್ತಿದ್ದು, ಬೆಂಗಳೂರಿನ ಹಲವು ಮಂದಿ ಮೈಸೂರಿನ ರಿಯಲ್ ಎಸ್ಟೇಟ್ ನಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ ಎಂದು ಸಿಆರ್ ಇ ಡಿಎಐ ಹೇಳಿದೆ.
ಮಾರ್ಚ್ 12 ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದ ಎಕ್ಸ್‌ಪ್ರೆಸ್‌ವೇ ನಲ್ಲಿ ಗರಿಷ್ಠ 100 ಕಿಮೀ ವೇಗದ ಮಿತಿನ್ನು ಅನುಮತಿಸಲಾಗಿದೆ ಮತ್ತು ಹಿಂದಿನ ಮೂರು ಗಂಟೆಗಳ ಪ್ರಯಾಣದ ಸಮಯ ಅರ್ಧಕ್ಕೆ ಇಳಿಕೆಯಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಸಿಆರ್ ಇಡಿಎಐ ಬೆಂಗಳೂರು ಅಧ್ಯಕ್ಷ ಅಮರ್ ಮೈಸೂರು, "ಹೊಸದಾಗಿ ಆರಂಭಿಸಲಾದ ಎಕ್ಸ್‌ಪ್ರೆಸ್‌ವೇಯಿಂದಾಗಿ ಮೈಸೂರಿನಲ್ಲಿ ರಿಯಲ್ ಎಸ್ಟೇಟ್‌ನ ಮೇಲಿನ ಹೂಡಿಕೆ ಹೆಚ್ಚಾಗುತ್ತಿದೆ. ಒಂದು ಗಂಟೆ 15 ಅಥವಾ 20 ನಿಮಿಷಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ. ಇದು ಮೈಸೂರಿನಲ್ಲಿ ಎರಡನೇ ಮನೆ ಅಥವಾ ಹಾಲಿಡೇ ಹೋಮ್‌ನಲ್ಲಿ ಹೂಡಿಕೆ ಮಾಡಲು ಬೆಂಗಳೂರಿಗರನ್ನು ಹೆಚ್ಚಾಗಿ ಪ್ರೇರೇಪಿಸುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ, ರಿಯಲ್ ಎಸ್ಟೇಟ್ ಕೈಗೆಟುಕುವಂತಿದೆ. ನಾಯಂಡಹಳ್ಳಿ ಅಥವಾ ಕೆಂಗೇರಿಯಂತಹ ದಕ್ಷಿಣ ಬೆಂಗಳೂರಿನವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ" ಎಂದು ಹೇಳಿದ್ದಾರೆ.
ಕೆಲವು ಕಂಪನಿಗಳು ವಾರಕ್ಕೆ ಎರಡು ಅಥವಾ ಮೂರು ಬಾರಿ ಅನುಮತಿಸುವ ಮನೆಯಿಂದ ಕೆಲಸ ಮಾಡುವ ಪರಿಕಲ್ಪನೆಯೂ ಸಹ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಲು ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ. "ಯಾವುದೇ ವ್ಯಕ್ತಿ ತಮ್ಮ ಮೈಸೂರಿನ ಮನೆಯಿಂದ ಕೆಲಸ ಮಾಡಬಹುದು ಮತ್ತು ಅವರು ಕಚೇರಿಗೆ ತೆರಳಬೇಕಾದರೆ ಒಂದು ಗಂಟೆಯಲ್ಲಿ ನಗರವನ್ನು ತಲುಪಬಹುದು" ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಕೆಲಸ ಮಾಡುವ ಇತರ ರಾಜ್ಯಗಳ ಜನರು ಮೈಸೂರನ್ನು ಆರಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಅಮರ್ ಪ್ರತಿಕ್ರಿಯೆ ನೀಡಿದ್ದು, “ಬೇರೆ ರಾಜ್ಯಗಳಿಂದ ಬಂದವರು ಶಾಪಿಂಗ್, ಆಹಾರ ಮತ್ತು ಇತರ ಮನರಂಜನಾ ಅಂಶಗಳಿಗಾಗಿ ಬೆಂಗಳೂರನ್ನು ಬಯಸುತ್ತಾರೆ. ಮೈಸೂರು ನಗರ ನೀಡುವ ಪ್ರಯೋಜನಗಳನ್ನು ಆನಂದಿಸಲು ಬಯಸುವ ಬೆಂಗಳೂರಿಗರಿಂದ ಹೆಚ್ಚಿನ ಆಸಕ್ತಿಯನ್ನು ಆಕರ್ಷಿಸುತ್ತಿದೆ. ಭವಿಷ್ಯದಲ್ಲಿ ಮಾತ್ರ ಬೇಡಿಕೆ ಹೆಚ್ಚಾಗಲಿದೆ” ಎಂದಿದ್ದಾರೆ.
ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಮಾತನಾಡಿ, ಬೆಂಗಳೂರಿಗೆ ಹೋಲಿಸಿದರೆ ಮೈಸೂರಿನಲ್ಲಿ ಭೂಮಿಯ ಬೆಲೆ ಅಗ್ಗವಾಗಿದೆ, ಪರಿಸರ ಉತ್ತಮವಾಗಿದೆ ಮತ್ತು ಜೀವನ ವೆಚ್ಚ ಕಡಿಮೆಯಾಗಿದೆ. ಹಾಗಾಗಿ ಮೈಸೂರಿಗೆ ಆದ್ಯತೆ ಇದೆ ಎಂದಿದ್ದಾರೆ.
ತೀವ್ರ ಕಾರ್ಮಿಕರ ಕೊರತೆ
ರಾಜ್ಯಾದ್ಯಂತ ಭಾರಿ ಕಾರ್ಮಿಕರ ಕೊರತೆ ನಿರ್ಮಾಣ ಉದ್ಯಮವನ್ನು ಕುಂಠಿತಗೊಳಿಸುತ್ತಿದೆ ಎಂದು ಅಮರ್ ಮೈಸೂರು ಇದೇ ವೇಳೆ ಹೇಳಿದ್ದಾರೆ. "ಪ್ರಸ್ತುತ, ನಾವು ನಮ್ಮ ಯೋಜನೆಗಳಿಗೆ ನಿಜವಾಗಿಯೂ ಅಗತ್ಯವಿರುವ 60% ಕಾರ್ಮಿಕರೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಬೆಂಗಳೂರಿನ ಹೆಚ್ಚಿನ ರಿಯಲ್ ಎಸ್ಟೇಟ್ ಯೋಜನೆಗಳು ಗಡುವನ್ನು ಮೀರಲು ಇದು ಪ್ರಮುಖ ಕಾರಣವಾಗಿದೆ" ಎಂದು ಅವರು ಹೇಳಿದರು.

