ಮಡಿಕೇರಿ: ಕೊಡಗಿನಲ್ಲಿ ದಂಪತಿಯೊಬ್ಬರು ತಮ್ಮ ಅನಾರೋಗ್ಯ ಪೀಡಿತ ಸಾಕು ನಾಯಿಯನ್ನು ಕಾವೇರಿ ನದಿಯಲ್ಲಿ ಎಸೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಡಿಕೇರಿ ತಾಲೂಕಿನ ಹೊದ್ದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಪಾಲೂರು ಗ್ರಾಮದಲ್ಲಿ ವಾಸವಾಗಿರುವ ಕರಿಯಪ್ಪ ಮತ್ತು ವೀಣಾ ದಂಪತಿ ತಮ್ಮ ಮನೆಯಿಂದ ಐದು ಕಿಲೋಮೀಟರ್ ದೂರದ ಹೊದ್ದೂರಿನ ಕಾವೇರಿ ನದಿಯ ಕಡೆಗೆ ತಮ್ಮ ಸಾಕು ನಾಯಿಯೊಂದಿಗೆ ತೆರಳಿದರು. ಸಾಕು ನಾಯಿಯನ್ನು ಗೋಣಿ ಚೀಲದಲ್ಲಿ ಕಾರಿನಲ್ಲಿ ತೆಗೆದುಕೊಂಡು ಹೋಗಿ, ಹೊದ್ದೂರು ಬಳಿಯ ಸೇತುವೆ ಬಳಿ ನದಿಗೆ ಎಸೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಂಪತಿ ಗೋಣಿ ಚೀಲದಲ್ಲಿ ಕೊರಳಪಟ್ಟಿ ಕಟ್ಟಿದ ನಾಯಿಯನ್ನು ನದಿಗೆ ಎಸೆದಿದ್ದಾರೆ. ಇದನ್ನು ನೋಡಿದ ಪೌರಕಾರ್ಮಿಕರು ಹೊದ್ದೂರು ಗ್ರಾ.ಪಂ.ಅಧ್ಯಕ್ಷೆ ಹಮ್ಜಾ ಅವರಿಗೆ ಮಾಹಿತಿ ನೀಡಿದ್ದಾರೆ.
"ನಾನು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಮತ್ತು ನಾವು ನಾಯಿಯನ್ನು ರಕ್ಷಿಸಲು ಪ್ರಯತ್ನಿಸಿದೇವು. ಆದರೆ ಅದು ನದಿಯಲ್ಲಿ ಮುಳುಗಿ ಹೋಗಿತ್ತು’ ಎಂದು ಹಮ್ಜಾ ತಿಳಿಸಿದ್ದಾರೆ.
ಹೊದ್ದೂರಿನಾದ್ಯಂತ ಹಲವಾರು ನಿವಾಸಿಗಳು ಆಗಾಗ್ಗೆ ಕಾವೇರಿ ನದಿಗೆ ಕಸವನ್ನು ಎಸೆಯುವುದು ಸಾಮಾನ್ಯ. ಹೀಗಾಗಿ ನದಿಗೆ ಅಕ್ರಮವಾಗಿ ಕಸ ಸುರಿಯುವುದನ್ನು ತಡೆಯಲು ಅಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ, ದಂಪತಿ ತಮ್ಮ ಸಾಕುನಾಯಿಯನ್ನು ನದಿಗೆ ಎಸೆದಾಗ ಕಾರ್ಮಿಕರು ಆಘಾತಕ್ಕೊಳಗಾಗಿದ್ದಾರೆ. "ಕಾರ್ಮಿಕರು ದಂಪತಿಯನ್ನು ಪ್ರಶ್ನಿಸಿದಾಗ, ಅವರು ತಮ್ಮ ಸಾಕುನಾಯಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದೆ. ಆದ್ದರಿಂದ ನಾಯಿಯನ್ನು ನದಿಗೆ ಎಸೆದಿರುವುದಾಗಿ ಹೇಳಿದ್ದಾರೆ" ಎಂದು ಹಮ್ಜಾ ವಿವರಿಸಿದರು.
ಕಸ ಸುರಿಯುವುದನ್ನು ತಡೆಯಲು ಈ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಆದಾಗ್ಯೂ, ದಂಪತಿಗಳು ಸಿಸಿಟಿವಿಯ ಕಣ್ಣು ತಪ್ಪಿಸಿ ಅನಾರೋಗ್ಯ ಪೀಡಿತ ಸಾಕು ನಾಯಿಯನ್ನು ನದಿಗೆ ಎಸೆದಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿ ದಂಪತಿಗೆ ಪಂಚಾಯಿತಿ 3000 ರೂ. ದಂಡ ವಿಧಿಸಿದೆ ಎಂದು ಅವರು ಹೇಳಿದ್ದಾರೆ.
Advertisement