
ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪರಿಹಾರ ವಂಚನೆ ಪ್ರಕರಣದಲ್ಲಿ ಕೆಐಎಡಿಬಿಯ ನಿವೃತ್ತ ಅಧಿಕಾರಿ ಹಾಗೂ ಓರ್ವ ಭೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
72 ಕೋಟಿ ರೂಪಾಯಿ ಮೌಲ್ಯದ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಕೆಐಎಡಿಬಿಯ ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಸಂತಕುಮಾರ ದುರ್ಗಪ್ಪ ಸಜ್ಜನ್ ಮತ್ತು ಮೈಬೂಬ್ ಅಲ್ಲಾಬುಕ್ಷ ದುಂಡಸಿ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮಂಗಳವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
KIADB ಕರ್ನಾಟಕದಲ್ಲಿ ಭೂಸ್ವಾಧೀನಕ್ಕೆ ನೋಡಲ್ ಏಜೆನ್ಸಿಯಾಗಿದೆ. ಹಣ ವರ್ಗಾವಣೆ ಪ್ರಕರಣ ಧಾರವಾಡ ಜಿಲ್ಲಾ ಸಿಐಡಿ ಸಲ್ಲಿಸಿದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ಆಧರಿಸಿದೆ. ಸಜ್ಜನ್ ಮತ್ತು ಧಾರವಾಡದ ಕೆಐಎಡಿಬಿಯ ಕೆಲವು ಅಧಿಕಾರಿಗಳು ಭೂ ದಲ್ಲಾಳಿಗಳು ಮತ್ತು ಇತರ ಕೆಲವು ಆರೋಪಿಗಳೊಂದಿಗೆ "ಸಂಚು" ನಡೆಸಿ 19.99 ಕೋಟಿ ರೂಗಳನ್ನು ಏಳು ವ್ಯಕ್ತಿಗಳಿಗೆ ಭೂಸ್ವಾಧೀನಕ್ಕೆ ಪರಿಹಾರದ ನೆಪದಲ್ಲಿ ಬಿಡುಗಡೆ ಮಾಡಿದ್ದರು.
"ಈ 7 ವ್ಯಕ್ತಿಗಳಿಗೆ ಈ ಹಿಂದೆ ಪರಿಹಾರವನ್ನು ನೀಡಲಾಗಿತ್ತು. ಮತ್ತೊಮ್ಮೆ ಪರಿಹಾರ ಬಿಡುಗಡೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡಿತು ಎಂದು ಫೆಡರಲ್ ಏಜೆನ್ಸಿ ಹೇಳಿದೆ. 2021-22ರ ಅವಧಿಯಲ್ಲಿ ಭೂಸ್ವಾಧೀನಕ್ಕೆ ಪರಿಹಾರವಾಗಿ KIADB ಯಿಂದ ಹಣವನ್ನು "ವಂಚನೆಯಿಂದ" ತೆಗೆಯಲಾಗಿತ್ತು ಎಂದು ಇಡಿ ಕಂಡುಹಿಡಿದಿದೆ. ಆದರೆ, 2010-12ರಲ್ಲಿ ಮೂಲ ಜಮೀನು ಮಾರಾಟಗಾರರಿಗೆ ಪರಿಹಾರ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ವಂಚನೆಯಿಂದ ತೆಗೆದ ಹಣವನ್ನು ನಕಲಿ ಗುರುತು ಮತ್ತು ವಿಳಾಸ ಪುರಾವೆಗಳೊಂದಿಗೆ ತೆರೆಯಲಾದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
"ನಿಜವಾದ ವಂಚನೆಯ ಪಾವತಿಗಳು ಎಫ್‌ಐಆರ್ ಮೊತ್ತವನ್ನು ಮೀರಿದೆ, ಅಂದಾಜು 72 ಕೋಟಿ ರೂ.ಗೆ ತಲುಪಿದೆ. ಈ ಪಾವತಿಗಳನ್ನು ನಕಲಿ ಗುರುತಿನೊಂದಿಗೆ ತೆರೆಯಲಾದ ಬ್ಯಾಂಕ್ ಖಾತೆಗಳಿಗೆ ಮಾಡಲಾಗಿದೆ ಮತ್ತು ನಂತರ ಶೆಲ್ ಖಾತೆಗಳ ಮೂಲಕ ಲಾಂಡರ್ ಮಾಡಲಾಗಿದೆ. ಈ ಹಣವನ್ನು ಸ್ಥಿರ ಆಸ್ತಿಗಳು, ವಾಹನಗಳು, ವಸತಿ ಆಸ್ತಿಗಳು ಮತ್ತು ಸ್ಥಿರ ಠೇವಣಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಕಳೆದ ತಿಂಗಳು ಕರ್ನಾಟಕದಾದ್ಯಂತ ಹನ್ನೆರಡು ಸ್ಥಳಗಳಲ್ಲಿ ಈ ಪ್ರಕರಣದಲ್ಲಿ ಏಜೆನ್ಸಿಯು ಹುಡುಕಾಟ ನಡೆಸಿತು.
Advertisement