ಬೆಂಗಳೂರು: ಪ್ರಭಾವ ಬಳಸಿ ಕೆಐಎಡಿಬಿಯಿಂದ (KIADB) ಸಿದ್ದಾರ್ಥ ಟ್ರಸ್ಟ್‌ಗೆ ಸಿಎ ನಿವೇಶನ ಪಡೆದಿದ್ದಾರೆಂಬ ಆರೋಪ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಳಿ ಬಂದಿದ್ದು, ಈ ಬಗ್ಗೆ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯುಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೂಚನೆ ನೀಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರ ಬರೆದಿದ್ದು, ವಿವರ ನೀಡುವಂತೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕೆಐಎಡಿಬಿ ಸಿಎ ನಿವೇಶನ ಮಾರಾಟ ಪ್ರಕರಣ ಸಂಬಂಧ ಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ದೂರು ನೀಡಿದ್ದರು. ನಾರಾಯಣಸ್ವಾಮಿ ದೂರಿನ ಹಿನ್ನೆಲೆಯಲ್ಲಿ ಸರ್ಕಾರದಿಂದ ಹಚ್ಚಿನ ವಿವರಣೆ ನೀಡುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ರಾಜ್ಯಪಾಲರ ಸೂಚನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ರಾಜ್ಯಪಾಲರಿಗೆ ಎರಡು ಸಂವಿಧಾನ ಇದೆ. ಬಿಜೆಪಿ, ಜೆಡಿಎಸ್ನದು ಒಂದು ಸಂವಿಧಾನ. ಕಾಂಗ್ರೆಸ್ಗೊಂದು ಸಂವಿಧಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿಚಾರದಲ್ಲಿ ಬಿಜೆಪಿಯವರು ಮೊದಲು 10 ಆರೋಪ ಮಾಡುತ್ತಿದ್ದರು. ಎರಡನೇ ದಿನ ಐದು ಆರೋಪಗಳನ್ನು ಮಾಡಿದ್ದರು. ಈಗ ಸುಮ್ಮನಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬಿಟ್ಟು ಬೇರೆ ಯಾರೂ ಏಕೆ ಸಿಎ ನಿವೇಶನ ವಿಚಾರ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿಜಯೇಂದ್ರ, ಆರ್.ಅಶೋಕ ಅವರು ನನ್ನ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ. ನಾನು ಕೆಳಮನೆ ಸದಸ್ಯ ಅಲ್ಲವೇ? ದಲಿತರ ನಡುವೆ ಬಡಿದಾಡಿಸುವುದು ಕೋಮುವಾದ ಸೃಷ್ಟಿಸುವುದು, ಇದೆಲ್ಲ RSS, BJP ಸಂಚು. ಬಿಜೆಪಿ-ಜೆಡಿಎಸ್‌ನವರ ದಾಖಲೆಗಳು ರಾಜ್ಯಪಾಲರ ಟೇಬಲ್‌ನಲ್ಲಿ ಕೊಳೆಯುತ್ತಿವೆ. ಅದಕ್ಕೇನು ವಿವರಣೆ ಕೇಳಿಲ್ಲ. ಬಿಜೆಪಿ ನಾಯಕರ ಪ್ರಕರಣದಲ್ಲಿ ನನ್ನ ಬಳಿ ಕಡತ ಇಲ್ಲ ಎಂದು ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಕೆಐಎಡಿಬಿ ಖರ್ಗೆ ಕುಟುಂಬದ ಒಡೆತನದಲ್ಲಿರುವ ಸಿದ್ಧವಿಹಾರ ಟ್ರಸ್ಟ್‌ಗೆ ಮಂಜೂರು ಮಾಡಿದೆ. ಮಾರ್ಚ್ 4 ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಮಾರ್ಚ್ 5 ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6 ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಇಷ್ಟೊಂದು ಅವಸರದಲ್ಲಿ ಹಂಚಿಕೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ ಛಲವಾದಿ ನಾರಾಯಣಸ್ವಾಮಿಯವರು ಪ್ರಶ್ನಿಸಿದ್ದಾರೆ.
ಟ್ರಸ್ಟ್‌ಗೆ ನೀಡಲಾಗಿರುವ ನಿವೇಶನ ಹಂಚಿಕೆಯಲ್ಲಿ ಹಲವು ಲೋಪಗಳಾಗಿವೆ. ಈ ಅಕ್ರಮದಿಂದ ಸರ್ಕಾರಕ್ಕೆ ಸುಮಾರು ರೂ1,000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದ್ದರು.
ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಿರುವುದರಿಂದ ಸಿಎ ನಿವೇಶನಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆಯೂ ಹಲವರಿಗೆ ತಿಳಿಯದಂತಾಗಿದೆ. ಇದು KIADB ಇತಿಹಾಸದಲ್ಲಿ ನಡೆದಿರುವ ಅತಿದೊಡ್ಡ ಲೋಪ ಎಂದು ಆರೋಪಿಸಿದ್ದರು.
Advertisement