ಚಿತ್ರದುರ್ಗ: ಮಂಡಿಯೂರಿ ಅಂಗಲಾಚಿ ಬೇಡಿ ಕೊಂಡರೂ ಕರುಣೆ ತೋರಿಸದೆ ತನ್ನ ಮಗನನ್ನು ಕ್ರೂರವಾಗಿ ಕೊಲೆ ಮಾಡಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನಿಜಕ್ಕೂ ಮನುಷ್ಯರಲ್ಲ, ರಾಕ್ಷಸರು ಎಂದು ರೇಣುಕಾಸ್ವಾಮಿಯ ತಂದೆ ಕಾಶಿನಾಥಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿಯವರ 2 ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋಟೊ ನೋಡಿದರೆ ದಿಗ್ಭ್ರಮೆಯಾಗುತ್ತಿದೆ. ಹೇಗೆ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ನನ್ನ ಮಗ ಎಷ್ಟು ಹಿಂಸೆಯಿಂದ ಒದ್ದಾಡಿರಬಹುದು. ಕಿರುಚಿ ಅತ್ತಿರಬಹುದು ಎಂದು ನೆನೆಸಿಕೊಂಡರೆ ನೋವು ಹೆಚ್ಚಾಗುತ್ತದೆ. ದರ್ಶನ್ ಹಾಗೂ ಆತನ ಗ್ಯಾಂಗ್ ನಿಜ ಜೀವನದಲ್ಲಿ ರಾಕ್ಷಸರಿಗಿಂತಲೂ ಭಯಾನಕ ರಾಕ್ಷಸರು ಎಂದರು.
ರೇಣುಕಾಸ್ವಾಮಿ ಸಾಯುವ ಮುನ್ನಾ ನನಗೆ ತಾಯಿ, ಗರ್ಭಿಣಿ ಹೆಂಡತಿ ಇರುವುದಾಗಿ ಹೇಳಿದ್ದರೂ ಕ್ಷಮಿಸದೆ ಆತನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಅವರನ್ನು ಒಂಚೂರು ಮನುಷ್ಯತ್ವ ಅನ್ನೋದೆ ಇಲ್ಲ. ಸರ್ಕಾರ ನನ್ನ ಮಗನಿಗಾದಂತೆ ಅವರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಅಳಲು ತೋಡಿಕೊಂಡರು. ರೇಣುಕಾಸ್ವಾಮಿ ಪತ್ನಿ ಗರ್ಭಿಣಿಯಾಗಿದ್ದು, ಮಗುವಿನ ತೂಕ ಕಡಿಮೆಯಾಗಿದೆ. ವೈದ್ಯರು ನಿರಂತರ ಉಪಚಾರ ಮಾಡುತ್ತಿದ್ದಾರೆ ಎಂದರು.
ರೇಣುಕಾಸ್ವಾಮಿಯ ಅಂತಿಮ ಕ್ಷಣದ ಫೋಟೋಗಳು ಪೊಲೀಸರಿಗೆ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಗಳ ಮೊಬೈಲ್ ನಿಂದ ರಿಟ್ರೀವ್ ಮಾಡಿದಾಗ ಫೋಟೋಗಳು ಸಿಕ್ಕಿದ್ದು, ಅದರಲ್ಲಿ ರೇಣುಕಾಸ್ವಾಮಿ ಕೈಮುಗಿದು ಕಣ್ಣೀರು ಸುರಿಸಿ ಅಂಗಲಾಚುತ್ತಿರುವ ಫೋಟೋ ಮತ್ತು ಆರೋಪಿಗಳಿಂದ ಹಲ್ಲೆಗೀಡಾಗಿ ಜೀವ ಬಿಡುವ ಹೊತ್ತಿನಲ್ಲಿ ಅನಾಥವಾಗಿ ಬಿದ್ದಿರುವ ಫೋಟೋಗಳು ಪೊಲೀಸರಿಗೆ ಸಿಕ್ಕಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.
Advertisement