ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಕ್ರೂರವಾಗಿ ಹಲ್ಲೆಗೀಡಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಅಂತಿಮ ಕ್ಷಣದ ಫೋಟೋಗಳು ಪೊಲೀಸರಿಗೆ ಲಭ್ಯವಾಗಿದ್ದು, ಇಂದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿವೆ.
ಆರೋಪಿಗಳ ಮೊಬೈಲ್ ನಿಂದ ರಿಟ್ರೀವ್ ಮಾಡಿದಾಗ ಫೋಟೋಗಳು ಸಿಕ್ಕಿದ್ದು, ಅದರಲ್ಲಿ ರೇಣುಕಾಸ್ವಾಮಿ ಕೈಮುಗಿದು ಕಣ್ಣೀರು ಸುರಿಸಿ ಅಂಗಲಾಚುತ್ತಿರುವ ಫೋಟೋ ಮತ್ತು ಆರೋಪಿಗಳಿಂದ ಹಲ್ಲೆಗೀಡಾಗಿ ಜೀವ ಬಿಡುವ ಹೊತ್ತಿನಲ್ಲಿ ಅನಾಥವಾಗಿ ಬಿದ್ದಿರುವ ಫೋಟೋಗಳು ಪೊಲೀಸರಿಗೆ ಸಿಕ್ಕಿದೆ. ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.
ಕೊಲೆಯಾದ ರೇಣುಕಾಸ್ವಾಮಿ ಫೋಟೋಗಳನ್ನು ಪ್ರಕರಣದಲ್ಲಿ A10 ಆರೋಪಿಯಾಗಿರುವ ವಿನಯ್ ಮೊಬೈಲ್ನಲ್ಲಿ ಸೆರೆಹಿಡಿದಿದ್ದನು. ಫೋಟೋ ಕ್ಲಿಕ್ಕಿಸಿ ಬಳಿಕ ಸ್ಮಾರ್ಟ್ಫೋನ್ನಿಂದ ಡಿಲೀಟ್ ಮಾಡಿದ್ದನು. ಆದರೆ ವಿಧಿ ವಿಜ್ಞಾನ ತಂಡ(FSL) ಟೀಂ ಡಿಲೀಟ್ ಆದ ಫೋಟೋಗಳನ್ನ ರಿಟ್ರೀವ್ ಮಾಡಿದೆ. ವಿನಯ್ ಫೋನ್ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿಯನ್ನು ನಿನ್ನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಸಲ್ಲಿಸಿದ್ದಾರೆ.
ರೇಣುಕಾ ಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು, ಫೋಟೋಗಳನ್ನು ಕಳೆದ ಕೆಲ ತಿಂಗಳಿನಿಂದ ಕಳುಹಿಸಿದ್ದರು. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿ ಅವರ ನಿರ್ದೇಶನದಂತೆ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್ ಗೆ ಕರೆತಂದು ಕ್ರೂರವಾಗಿ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದೆ.
ಸ್ಪೆಷಲ್ ಕೋರ್ಟ್ ಅಥವಾ ಪಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪ್ರಯತ್ನ:
ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ಈ ಪ್ರಕರಣದ ತ್ವರಿತ ವಿಚಾರಣೆಗೆ ಪೊಲೀಸರು ಪ್ರತ್ಯೇಕ ಕೋರ್ಟ್ ರಚಿಸಲು, ಸ್ಪೆಷಲ್ ಕೋರ್ಟ್ ಅಥವಾ ಪಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement