
ಬೆಂಗಳೂರು: ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲಿಯೂ ನಟಿಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ, ಶೋಷಣೆ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಫೈರ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ನೇತೃತ್ವದಲ್ಲಿನ ಫೈರ್ ನಿಯೋಗ ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಮನವಿ ಸಲ್ಲಿಸಿತು.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸಮಸ್ಯೆ ಅಧ್ಯಯನ ಮಾಡಬೇಕು. ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ತಡೆಗಟ್ಟುವ ಸಲುವಾಗಿಸಮಿತಿ ರಚಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಸಂಬಂಧ 130ಕ್ಕೂ ಅಧಿಕ ಮಂದಿ ಸಹಿ ಮಾಡಿರುವ ಪತ್ರವನ್ನು ಫೈರ್ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಹಿರಿಯ ಲೇಖಕಿ ಡಾ. ವಿಜಯಾ, ಚೇತನ್, ನಟಿಯರಾದ ಶೃತಿ ಹರಿಹರನ್, ನೀತು ಈ ನಿಯೋಗದಲ್ಲಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಚೇತನ್, ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ ಕುರಿತು ಮತ್ತಷ್ಟು ಮಾಹಿತಿ ತಿಳಿಯಲು ವಿಸ್ತೃತವಾದ ಸಭೆ ನಡೆಸಲು ಮುಖ್ಯಮಂತ್ರಿ ಒಪ್ಪಿರುವುದಾಗಿ ತಿಳಿಸಿದ್ದಾರೆ.
Advertisement