ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರದ ವಿತರಣಾ ಟ್ಯಾಂಕ್ 3ರಲ್ಲಿ ನೀರೆತ್ತುವ ಪಂಪ್ ಹಾಗೂ ಮೋಟಾರ್ಗಳನ್ನು ಆನ್ ಮಾಡುವ ಮೂಲಕ ಸಿಎಂ, ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ. ಜನರು ಅಪ ಪ್ರಚಾರಗಳಿಗೆ ಕಿವಿಗೂಡಬಾರದು ಎಂದರು. ಇದಕ್ಕೂ ಮೊದಲು ಬೆಳಗ್ಗೆ 8.30ರಿಂದ ಉದ್ಘಾಟನಾ ಸ್ಥಳದಲ್ಲಿ ಹೋಮ ಹವನ ನೆರವೇರಿತು. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ' ಮಾರ್ಚ್ 31, 2027 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗಡ ಹಳ್ಳದಿಂದ ಮಳೆಗಾಲದಲ್ಲಿ ಲಭ್ಯವಿರುವ 24.01 ಟಿಎಂಸಿ ನೀರನ್ನು ಈ ಯೋಜನೆ ಬಳಸಿಕೊಳ್ಳಲಿದೆ ಎಂದು ತಿಳಿಸಿದರು. ಈಮಧ್ಯೆ, ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಾರ್ತಾ ಇಲಾಖೆಯ ವಾಹನದಲ್ಲಿ ತೆರಳುತ್ತಿದ್ದಾಗ ಬ್ರೇಕ್ ಫೇಲ್ ಆಗಿ ಏಳು ಮಂದಿ ಪತ್ರಕರ್ತರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಇಂದು ನಡೆದಿದೆ.
ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಹರಿಯಾಣ ಮೂಲದ ಶಂಕಿತ ಮಾವೋವಾದಿಯೊಬ್ಬನನ್ನು ಲಾಡ್ಜ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು 35 ವರ್ಷದ ಅನಿರುದ್ಧ್ ರಾಜನ್ ಎಂದು ಗುರುತಿಸಲಾಗಿದ್ದು, ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು ಮತ್ತು ಟ್ಯಾಬ್ಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ, ಅನಿರುದ್ಧ್ ಅವರು ನಿಷೇಧಿತ ಎಡಪಂಥೀಯ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಆತನನ್ನು ಬಂಧಿಸಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ವಿಮೆ ಮೇಲಿನ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿಯನ್ನು ಮರುಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಸರ್ಕಾರ ಒತ್ತಾಯಿಸಿದೆ. ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಪ್ರಧಾನಿಗೆ ಪತ್ರ ಬರೆದಿದ್ದು, ಸೆಪ್ಟೆಂಬರ್ 9 ರಂದು ನಿಗದಿಯಾಗಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆ ಮೇಲಿನ ಶೇಕಡಾ 18 ರಷ್ಟು ತೆರಿಗೆಯನ್ನು ದಯವಿಟ್ಟು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಯುನಿವರ್ಸಲ್ ಇನ್ಶೂರೆನ್ಸ್‌ನ ದೃಷ್ಟಿಕೋನವನ್ನು ಪ್ರತಿಪಾದಿಸುವ ಸರ್ಕಾರವು ತುಂಬಾ ಹೆಚ್ಚುತೆರಿಗೆ ವಿಧಿಸುವುದು ದುರದೃಷ್ಟಕರ ಮಾತ್ರವಲ್ಲ, ವಿಪರ್ಯಾಸವೂ ಆಗಿದೆ. 2047ರಲ್ಲಿನ ಆರೋಗ್ಯ ವಿಮೆಯಲ್ಲಿನ ಸಾರ್ವತ್ರೀಕರಣದ ದೃಷ್ಟಿಯಿಂದ ಇದು ಧನಾತ್ಮಕ ಹೆಜ್ಜೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ ಕುರಿತು ಮಹಿಳಾ ಕಲಾವಿದರೊಂದಿಗೆ ಚರ್ಚಿಸಲು ಸೆಪ್ಟೆಂಬರ್ 16 ರಂದು ಸಭೆಯನ್ನು ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿ ಕರೆದಿದೆ. ರಾಜ್ಯ ಮಹಿಳಾ ಆಯೋಗದ ಸೂಚನೆಯಂತೆ ಈ ಸಭೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 13 ರಂದು ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಹೇಳಿತ್ತು. ಆದರೆ, ಅದು ಹಬ್ಬದ ದಿನವಾಗಿದೆ. ಅಲ್ಲದೇ ಕಲಾವಿದರು ಶೂಟಿಂಗ್ ನಲ್ಲಿರುವ ಸಾಧ್ಯತೆಯಿದ್ದು, ಅವರ ಷೆಡ್ಯೂಲ್ ಗೆ ತಕ್ಕಂತೆ ಸಮಯವನ್ನು ಹೊಂದಿಸಬೇಕಾದ್ದರಿಂದ ಹೆಚ್ಚಿನ ಸಮಯದ ಅಗತ್ಯವಿದ್ದು, ತಾತ್ಕಾಲಿಕವಾಗಿ ಸೆಪ್ಟೆಂಬರ್ 16 ರಂದು ಸಭೆ ಕರೆದಿದ್ದೇವೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ತಿಳಿಸಿದ್ದಾರೆ.
ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಕೋಪಗೊಂಡು ಯುವತಿ ಮೇಲೆ ಹಲ್ಲೆ ಮಾಡಿದ್ದ ಮುತ್ತುರಾಜ್ ಎಂಬ ಆಟೋ ಚಾಲಕನನ್ನು ಮಾಗಡಿ ರಸ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.2ರಂದು ಈ ಘಟನೆ ನಡೆದಿತ್ತು. ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋವನ್ನು ಮಾಡಿಕೊಂಡಿದ್ದ ಯುವತಿ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು.
Advertisement