
ಚೆನ್ನೈ: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುಗರ ವಿರುದ್ಧ ಹೇಳಿಕೆ ನೀಡಿ, ಕ್ಷಮೆಯಾಚಿಸಿದ ಬೆನ್ನಲ್ಲೇ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಅನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ತಮಿಳುನಾಡು ಜನತೆಯಲ್ಲಿ ಶೋಭಾ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದುವರೆಸಲು ಬಯಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದು, ಕ್ಷಮೆ ಯಾಚನೆ ಅಂಗೀಕರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂದು ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರು ನ್ಯಾಯಮೂರ್ತಿ ಜಿ ಜಯಚಂದ್ರನ್ ನೇತೃತ್ವದ ಪೀಠಕ್ಕೆ ವಿವರಿಸಿದರು.
ಈ ವಾದವನ್ನು ಮನ್ನಿಸಿದ ನ್ಯಾಯಮೂರ್ತಿಗಳು ಶೋಭಾ ವಿರುದ್ಧ ಮಧುರೈ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಸೂಚಿಸಿದರು.
ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆಯವರು, ಪ್ರಕರಣ ರದ್ದುಪಡಿಸಿದ್ದಕ್ಕಾಗಿ ನ್ಯಾಯಾಲಯಕ್ಕೆ ಕೃತಜ್ಞಳಾಗಿದ್ದೇನೆಂದು ಹೇಳಿದ್ದಾರೆ. ಅದಾಗ್ಯೂ, ನಾನು ನೀಡಿದ್ದ ಹೇಳಿಕೆ ನಿಜವೆಂದು ಸಾಬೀತಾಗಿದೆ ಎಂದು ತಿಳಿಸಿದರು.
ಬಾಂಬ್ ಇಟ್ಟಿದ್ದ ಸ್ಥಳಕ್ಕೆ ಆರೋಪಿಗಳು ಹಲವು ಬಾರಿ ಭೇಟಿ ನೀಡಿ,. ಕೃತ್ಯಕ್ಕೆ ಯತ್ನಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಎರಡು ಅಥವಾ ಮೂರು ರಾಜ್ಯಗಳಲ್ಲಿ ಈ ರೀತಿಯ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷ್ಯಗಳೂ ಲಭ್ಯವಾಗಿವೆ. ನನ್ನ ಮಾತುಗಳು ಸ್ವಲ್ಪ ಮಟ್ಟಿಗೆ ನಿಜವೆಂಬುದನ್ನು ಇದು ಸಾಬೀತುಪಡಿಸುತ್ತದೆ. ನ್ಯಾಯಾಲಯದಲ್ಲಿ ನನ್ನ ವಿರುದ್ಧ ಇನ್ನೂ ಹಲವು ಪ್ರಕರಣಗಳಿವೆ. ಆಧರೆ, ಈ ಪ್ರಕರಣದಲ್ಲಿ ನ್ಯಾಯಾಲಯ ಪರಿಹಾರ ನೀಡಿದೆ. ಇದಕ್ಕೆ ನಾನು ಕೃತಜ್ಞಳು ಎಂದು ತಿಳಿಸಿದ್ದಾರೆ.
ಕರ್ನಾಟಕದ ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟಕ್ಕೂ ತಮಿಳುನಾಡಿನ ವ್ಯಕ್ತಿಗೂ ಸಂಬಂಧವಿದೆ ಎಂದು ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದರು. ನಂತರ ಈ ಸಂಬಂಧ ಡಿಎಂಕೆಯಿಂದ ತ್ಯಾಗರಾಜನ್ ನೀಡಿದ ದೂರಿನ ಆಧಾರದ ಮೇಲೆ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈನಲ್ಲಿ ಕೋಮುಗಲಭೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವುದು ಸೇರಿದಂತೆ 4 ಸೆಕ್ಷನ್‌ಗಳ ಅಡಿಯಲ್ಲಿ ಶೋಭಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಬಳಿಕ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಶೋಭಾ ಅವರು ನ್ಯಾಯಾಲಯಕ್ಕೆ ಕ್ಷಮೆಯಾಚನೆ ಪತ್ರವನ್ನು ಸಲ್ಲಿಸಿದರು. ‘ನಾನು ಆಡಿರುವ ಮಾತುಗಳು ತಮಿಳುನಾಡಿನ ಕೆಲವರ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂಬುದನ್ನು ಅರ್ಥ ಮಾಡಿಕೊಂಡು, ಹೇಳಿಕೆಯನ್ನು ಈಗಾಗಲೇ ಹಿಂಪಡೆದಿದ್ದೇನೆ, ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಯಾಚಿಸಿದ್ದೇನೆ’ ಎಂದು ಶೋಭಾ ಹೇಳಿದ್ದರು.
Advertisement