
ರಾಮನಗರ: ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವಾಗ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಾಪಣ್ಣ (60) ಮೃತಪಟ್ಟವರು. ಗ್ರಾಮದಲ್ಲಿ ಮೂರ್ತಿ ಮೆರವಣಿಗೆ ಮಾಡಿದ್ದ ಗ್ರಾಮಸ್ಥರು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೆರೆಯಲ್ಲಿ ವಿಸರ್ಜನೆ ಮಾಡಿದ್ದಾರೆ.
ಗ್ರಾಮಸ್ಥರೊಂದಿಗೆ ಕೆರೆ ಬಳಿಗೆ ಹೋಗಿದ್ದ ಪಾಪಣ್ಣ ಮನೆಗೆ ಬಂದಿರಲಿಲ್ಲ. ಕುಟುಂಬದವರು ಅಕ್ಕಪಕ್ಕ ಹುಡುಕಾಡಿದ್ದು, ಎಲ್ಲೂ ಕಾಣದಿದ್ದಾಗ ಕೆರೆ ಬಳಿ ಹೋಗಿ ಪರಿಶೀಲಿಸಿದಾಗ ಅವರ ಟವೆಲ್ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು, ಅವರು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮಧ್ಯಾಹ್ನ 2-30ರ ಸುಮಾರಿಗೆ ಪಾಪಣ್ಣ ಅವರ ಶವ ಪತ್ತೆಯಾಯಿತು. ನಂತರ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಘಟನೆ ಕುರಿತು ಅಕ್ಕೂರು ಠಾಣೆ ಪೂಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement