ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಇತ್ತೀಚೆಗೆ ತನಿಖೆಯ ಚಾರ್ಜ್ ಶೀಟ್ ನ್ನು ಕೋರ್ಟ್ ಗೆ ಪೊಲೀಸರು ಸಲ್ಲಿಸಿದ್ದು ಅದಕ್ಕೆ ಸಂಬಂಧಪಟ್ಟ ಸುದ್ದಿಗಳು ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿವೆ.
ದರ್ಶನ್ ಮತ್ತು ಗ್ಯಾಂಗ್ ಯಾವ ರೀತಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಪೊಲೀಸರು ವಿವರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇದಕ್ಕೆ ನಿರ್ಬಂಧ ಹೇರುವಂತೆ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ ಮೊರೆ ಹೋಗಿ ಚಾರ್ಜ್ ಶೀಟ್ ನ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕೆಂದು ಕೋರಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರ ಹಿಂಸೆಗಳ ಬಗ್ಗೆ ಅಲ್ಲಿ ವಿವರಣೆ ನೀಡಲಾಗಿತ್ತು. ಇವುಗಳ ಪ್ರಸಾರದ ಮೇಲೆ ನಿರ್ಬಂಧ ಹೇರಿ ಎಂದು ದರ್ಶನ್ ಕೋರಿದ್ದಾರೆ.
ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿದ್ದು, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಪೂರ್ಣಗೊಳ್ಳಲಿದೆ. ಕೋರ್ಟ್ನಲ್ಲಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಎಲ್ಲಾ ಆರೋಪಿಗಳು ವಿಚಾರಣೆ ಎದುರಿಸಲಿದ್ದಾರೆ.
Advertisement