ಹೊಸಪೇಟೆ: ತುಂಗಭದ್ರಾ ಅಣೆಗಟ್ಟಿನ ಕ್ರಸ್ಟ್ ಗೇಟ್ ತುಂಡಾಗಿ ಕಳಚಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖಾ ತಂಡ ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ ಕೆ ಬಜಾಜ್ ಅವರು ತನಿಖಾ ತಂಡದ ಮುಖ್ಯಸ್ಥರಾಗಿದ್ದು, ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖಾ ತಂಡದಲ್ಲಿ ಒಟ್ಟು 6 ಮಂದಿ ಸದಸ್ಯರಿದ್ದರು.
ಕ್ರೆಸ್ಟ್ ಗೇಟ್ ಸಂಖ್ಯೆ 19 ಒಡೆದು ನದಿಯಲ್ಲಿ ಕೊಚ್ಚಿಹೋದ ಘಟನೆಯ ನಂತರ ಹಲವು ಹಿರಿಯ ಎಂಜಿನಿಯರ್‌ಗಳು ಮತ್ತು ಅಣೆಕಟ್ಟುಗಳ ಹೈಡ್ರೋ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪರಿಣಿತ ಕನ್ನಯ್ಯ ನಾಯ್ಡು ಅವರು ಅಣೆಕಟ್ಟಿನ ಪ್ರಸ್ತುತ ಸ್ಥಿತಿಯನ್ನು ಅಧ್ಯಯನ ಮಾಡಲು ತುಂಗಭದ್ರಾ ಅಣೆಕಟ್ಟು ಮಂಡಳಿಗೆ ಸಲಹೆ ನೀಡಿದ್ದರು.
ತಜ್ಞರ ಸಲಹೆಯಂತೆ ಟಿಬಿ ಅಣೆಕಟ್ಟು ಮಂಡಳಿ ತಂಡ ರಚಿಸಿತ್ತು. ಇದರಂತೆ ತನಿಖಾ ತಂಡವು ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ, ಡ್ಯಾಮ್ ಕ್ರೆಸ್ಟ್ ಗೇಟ್ ಘಟನೆಯ ಎಲ್ಲಾ ಮಾಹಿತಿಯನ್ನು ತಂಡ ಸಂಗ್ರಹಿಸಿದೆ.
ತನಿಖಾ ತಂಡದ ಅಧ್ಯಕ್ಷ ಎ ಕೆ ಬಜಾಜ್ ಮತ್ತು ಇತರ ಐವರು ಅಧಿಕಾರಿಗಳಉ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಸಂಖ್ಯೆ 19 ಗೆ ಭೇಟಿ ನೀಡಿದರು. ಈ ವೇಳೆ ಮಂಡಳಿಯು ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಮತ್ತು ಅಣೆಕಟ್ಟಿನ ಸಂಪೂರ್ಣ ಮಾಹಿತಿಯನ್ನು ತನಿಖಾ ತಂಡಕ್ಕೆ ಒದಗಿಸಿದೆ.
ವರದಿ ಸಲ್ಲಿಸಲು ತನಿಖಾ ತಂಡಕ್ಕೆ 15 ದಿನಗಳ ಕಾಲಾವಕಾಶವಿದೆ. ಸಾಧ್ಯವಾದಷ್ಟು ಬೇಗ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ನಂತರ ಸಮಿತಿಯ ಸಲಹೆಗಳನ್ನು ಸಿಡಬ್ಲ್ಯುಸಿಗೆ ರವಾನಿಸಲಾಗುವುದು. ಸಿಡಬ್ಲ್ಯುಸಿ ಸೂಚನೆಗಳನ್ನು ಪಾಲಿಸಲು ಸಿದ್ಧಸಿದ್ದೇವೆಂದು ಅಧಿಕಾರಿಗಳು ಹೇಳಿದ್ದಾರೆ.
Advertisement