ಚನ್ನಪಟ್ಟಣ: ಚನ್ನಪಟ್ಟಣ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರ ವಿರುದ್ಧ ಮಹಿಳೆಯೊಬ್ಬರು ರಾಮನಗರ ಜಿಲ್ಲೆಯ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ತೂಬಿನಕೆರೆಯ ಬಿಜೆಪಿ ಮುಖಂಡ ಟಿ.ಎಸ್.ರಾಜು ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆ, ಗಣೇಶ ಹಬ್ಬದ ಸಲುವಾಗಿ ತವರು ಮನೆಗೆ ಬಂದಿದ್ದರು. ಸೆ. 7ರಂದು ಗ್ರಾಮದಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಸಲುವಾಗಿ ಮೆರವಣಿಗೆ ನಡೆಯುವಾಗ ಮಹಿಳೆ ರಾತ್ರಿ 11.40ರ ಸುಮಾರಿಗೆ ಮನೆ ಮುಂದೆ ನಿಂತಿದ್ದರು. ತಾಯಿ ಕಾರ್ಯನಿಮಿತ್ತ ಒಳಕ್ಕೆ ಹೋಗಿದ್ದರು. ಮಹಿಳೆ ಒಬ್ಬರೇ ಇದ್ದಿದ್ದನ್ನು ಗಮನಿಸಿ ಅವರತ್ತ ಬಂದಿದ್ದ ರಾಜು, ‘ಯಾವಾಗ ಬಂದೆ ಬೇಬಿ’ ಎಂದು ಕೇಳಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಹೆಗಲ ಮೇಲೆ ಕೈ ಹಾಕಿ ಎದೆ ಭಾಗವನ್ನು ಮುಟ್ಟುತ್ತಾ, ಕಾಮುಕ ದೃಷ್ಟಿಯಿಂದ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ. ಅಲ್ಲದೆ, ತನ್ನ ಮೊಬೈಲ್ ಫೋನ್‌ನಿಂದ ಮಹಿಳೆಯ ಫೋಟೊ ತೆಗೆದು ತನ್ನ ಸ್ನೇಹಿತರಿಗೆ ಕಳಿಸಿದ್ದ. ಈ ಕುರಿತು ಮಹಿಳೆ ಪ್ರಶ್ನಿಸಿದಾಗ, ‘ನನ್ನ ಮೊಬೈಲ್, ನನ್ನಿಷ್ಟ’ ಎಂದು ರಾಜು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.
ಆತನ ವರ್ತನೆಯಿಂದ ದಿಗ್ಬ್ರಮೆಗೊಂಡ ಮಹಿಳೆ ತಕ್ಷಣ ಒಳಗಿದ್ದ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಪ್ರಶ್ನಿಸಿದಾಗ, ರಾಜು ತಬ್ಬಿಬ್ಬುಗೊಂಡಿದ್ದಾನೆ. ನಂತರ, ಕುಟುಂಬದವರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಆತನ ಮೊಬೈಲ್ ಕಿತ್ತಕೊಂಡು ಇಟ್ಟುಕೊಂಡಿದ್ದು, ತನಿಖೆ ಸಂದರ್ಭದಲ್ಲಿ ಹಾಜರುಪಡಿಸುವೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಹಿಂದೆಯೂ ರಾಜು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನನಗೆ ಕರೆ ಮಾಡಿ, ‘ಮೈಸೂರು ಕಾಫಿ ಡೇಗೆ ಹೋಗೋಣ. ನೀನೊಬ್ಬಳೇ ಬಾ. ಯಾರಿಗೂ ಹೇಳಬೇಡ’ ಎಂದಿದ್ದ. ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ರಾಜು, ನನ್ನ ಗೌರವಕ್ಕೆ ಚ್ಯುತಿ ತಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ರಾಜು ಅವರನ್ನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂಎನ್ ಆನಂದಸ್ವಾಮಿ ಸೋಮವಾರ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
Advertisement