
ರಾಮನಗರ: ರಾಮನಗರದ ಚಾಮುಂಡಿಪುರ ಲೇಔಟ್ನ 5 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆರೋಪಿ 22 ವರ್ಷದ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದ ಘಟನೆಯೇನು?: ಆರೋಪಿ ದರ್ಶನ್ ಬಾಲಕಿಯ ಪಕ್ಕದ ಮನೆಯವನೇ ಆಗಿದ್ದು, ಬೀಡಿ, ಸಿಗರೇಟ್ ಮತ್ತು ಗಾಂಜಾ ಚಟಕ್ಕೆ ದಾಸನಾಗಿದ್ದಾನೆ. ತನ್ನ ಚಟಕ್ಕಾಗಿ ಅವರಿವರಿಂದ 10-20 ರೂಪಾಯಿ ಕೇಳಿ ಪಡೆಯುತ್ತಿದ್ದನು. ಕೊನೆಗೆ ಯಾರು ಹಣ ನೀಡದಿದ್ದಾಗ, ಬಾಲಕಿಯನ್ನು ಅಪಹರಣ ಮಾಡಲು ಪ್ಯ್ಲಾನ್ ಮಾಡಿದನು. ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂಪಾಯಿ ಬೇಡಿಕೆ ಇಡಲು ಯೋಚಿಸಿದ. ಬಂದ ಹಣ ತನ್ನ ಚಟಕ್ಕೆ ಆಗುತ್ತದೆ ಎಂದು ಅಪಹರಣ ಕುಕೃತ್ಯಕ್ಕೆ ಕೈ ಹಾಕಿದ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಬಾಲಕಿ ಗಣೇಶ ಪೆಂಡಾಲ್ ಬಳಿ ಇದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ದರ್ಶನ್ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯ ಕೈ ಮತ್ತು ಬಾಯಿಗೆ ಟೇಪ್ನಿಂದ ಸುತ್ತಿ ಕೂರಿಸಿದ್ದಾನೆ.
ಮಗಳು ಕಾಣದಿದ್ದಾಗ ತಂದೆ ಸಂತೋಷ್ ಗಾಬರಿಗೊಂಡು ಹುಡುಕಾಡಲು ಆರಂಭಿಸಿದ್ದಾರೆ. ಈ ವಿಚಾರವನ್ನು ಗಣೇಶ ಪೆಂಡಾಲ್ ಬಳಿ ಇದ್ದ ಯುವಕರಿಗೂ ತಿಳಿಸಿದ್ದಾರೆ. ನಂತರ ಯುವಕರೆಲ್ಲರೂ ಒಂದುಗೂಡಿ ಹುಡುಕಾಡಲು ಶುರು ಮಾಡಿದ್ದಾರೆ.
ಸ್ಥಳೀಯರ ಹುಡುಕಾಟ ಮತ್ತು ಶಬ್ದ ಕೇಳಿದ ಆರೋಪಿ ದರ್ಶನ್ ಭಯದಿಂದ ಬಾಲಕಿಯನ್ನು ಬಿಟ್ಟು ಪರಾರಿಯಾಗಲು ಮುಂದಾಗಿದ್ದಾನೆ. ಈತನ ಮೇಲೆ ಅನುಮಾನಗೊಂಡ ಯುವಕರು, ಹಿಡಿದು ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾನೆ. ಯುವಕರು ತೆರಳಿದಾಗ ಬಾಲಕಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದಳು. ಕೂಡಲೇ ಯುವಕರು ಬಾಲಕಿ ಕೈ ಮತ್ತು ಬಾಯಿಗೆ ಹಚ್ಚಿದ್ದ ಟೇಪ್ ತೆಗೆದು ರಕ್ಷಿಸಿದ್ದಾರೆ. ಆರೋಪಿ ದರ್ಶನ್ನನ್ನು ಯುವಕರು ಐಜೂರು ಪೊಲೀಸರಿಗೆ ಒಪ್ಪಿಸಿದರು.
Advertisement