ಬೆಳಗಾವಿ: ವಂದೇ ಭಾರತ್ ರೈಲು ಸಂಚಾರ ಸೌಲಭ್ಯವನ್ನು ಬೆಳಗಾವಿಗರಿಗೆ ಒದಗಿಸಲು ಬದ್ಧನಾಗಿದ್ದೇನೆಂದು ಸಂಸದ ಜಗದೀಶ ಶೆಟ್ಟರ್ ಅವರು ಮಂಗಳವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಧಾರವಾಡ ಮಾರ್ಗದ ವಂದೇ ಭಾರತ್ ರೈಲನ್ನು ಬೆಳಗಾವಿ ವರೆಗೆ ವಿಸ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಕೆಲವು ತಿಂಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿಯಾಗಿ, ಪುಣೆ-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸಬೇಕು. ಬೆಂಗಳೂರು-ಧಾರವಾಡ ವಂದೇ ಭಾರತ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದೆ. ಈಗ ಪುಣೆ–ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ರೈಲು ಸೇವೆ ಆರಂಭವಾಗಿದೆ. ಅಂದು ಬೆಳಗಾವಿ ನಿಲ್ದಾಣದಲ್ಲೂ ಕಾರ್ಯಕ್ರಮ ಆಯೋಜಿಸಿ, ರೈಲು ಸ್ವಾಗತಿಸಲಾಗುವುದು ಎಂದು ಹೇಳಿದರು.
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಣೆಗೆ ಎದುರಾಗಿದ್ದ ಅಡೆ–ತಡೆಗಳೆಲ್ಲ ಈಗ ನಿವಾರಣೆಯಾಗಿವೆ. ಆ ರೈಲನ್ನು ಬೆಳಗಾವಿಗೆ ವಿಸ್ತರಿಸಲು ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಳಗೊಳಗೆ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಇದೀಗ ಬಹಿರಂಗವಾಗಿ ನಡೆಯುತ್ತಿದೆ. ಕೆಲವು ಸಚಿವರು ಸಿದ್ದರಾಮಯ್ಯ ಅವರ ಪರವಾಗಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಎರೆ ಮರೆಯಲ್ಲಿ ಮುಖ್ಯಮಂತ್ರಿಯಾಗಿ ಬದಲಾವಣೆ ಬಗ್ಗೆ ಚರ್ಚಿಸುತ್ತಿದ್ದಾರೆ. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತಾರೂ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ನಾವು ಆಪರೇಷನ್ ಕಮಲ ಮಾಡುವುದು ಬೇಕಾಗಿಲ್ಲ. ಅವರ ಶಾಸಕ, ಸಚಿವರೇ ಒಬ್ಬರಿಗೊಬ್ಬರು ಕಾಲು ಎಳೆಯುವುದು ಆರಂಭವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮುಡಾ, ವಾಲ್ಮೀಕಿ ಹಗರಣದಲ್ಲಿ ಸರಕಾರ ಮುಳುಗಿ ಹೋಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನಿರ್ಣಾಮವಾಗಲಿದೆ. ರಾಜ್ಯ ಸರಕಾರ ತನ್ನ ತಪ್ಪಿನಿಂದ ಪತನಗೊಳ್ಳಲಿದೆ, ಅಧಿಕಾರಿಗಳ ಯಡವಟ್ಟಿನಿಂದ ಮಹಾನಗರ ಪಾಲಿಕೆ ಆರ್ಥಿಕ ದಿವಾಳಿಯಾಗುವ ಆತಂಕ ಎದುರಾಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ಈ ಈ ರೀತಿಯ ಸಮಸ್ಯೆ ಆಗುತ್ತದೆ. ಬೆಳಗಾವಿ ಮಹಾನಗರ ಪಾಲಿಕೆಯನ್ನು ಆರ್ಥಿಕವಾಗಿ ಸುಧಾರಣೆ ಮಾಡಲು ನನ್ನಿಂದ ಮಾತ್ರವೇ ಸಾಧ್ಯವಿಲ್ಲ. ಎಲ್ಲರೂ ಜೊತೆಗೂಡಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು.
Advertisement