ಬೆಂಗಳೂರು: ಹಲವು ವ್ಯಕ್ತಿಗಳ ವಿರುದ್ಧ ಕಳೆದ 10 ವರ್ಷಗಳಲ್ಲಿ 9 ಮಂದಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಮಹಿಳೆಯೊಬ್ಬರನ್ನು ಪತ್ತೆ ಮಾಡುವಂತೆ ಕರ್ನಾಟಕ ಹೈ ಕೋರ್ಟ್ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಐಪಿಸಿ ಸೆಕ್ಷನ್ 498A ಸೇರಿ ಹಲವು ಸೆಕ್ಷನ್ ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಸೆಕ್ಷನ್ 498 A ಮಹಿಳೆಯ ಪತಿ ಅಥವಾ ಮಹಿಳೆಯ ಪತಿಯ ಸಂಬಂಧಿಕರು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಸಂಬಂಧಿಸಿದ್ದಾಗಿದೆ.
ಏಕಸದಸ್ಯ ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ, ಪೊಲೀಸ್ ಠಾಣೆಗಳು ಮಹಿಳೆಯ ದೂರುಗಳ ದಾಖಲೆಯನ್ನು ನಿರ್ವಹಿಸಬೇಕು ಮತ್ತು ಹೆಚ್ಚುವರಿ ದೂರುಗಳನ್ನು ಸಲ್ಲಿಸಲು ಪ್ರಯತ್ನಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಯಾವುದೇ ಹೊಸ ದೂರುಗಳನ್ನು ದಾಖಲಿಸುವ ಮೊದಲು, ಸುಳ್ಳು ಪ್ರಕರಣಗಳನ್ನು ಪದೇ ಪದೇ ದಾಖಲಿಸುವುದನ್ನು ತಡೆಯಲು ಪ್ರಾಥಮಿಕ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"ಇದು ಅಮಾಯಕ ಪುರುಷರ ವಿರುದ್ಧ ವಿವೇಚನೆಯಿಲ್ಲದೇ ಪ್ರಕರಣ ದಾಖಲಾಗುವುದನ್ನು ನಿಲ್ಲುಸುವುದಕ್ಕಾಗಿನ ಕ್ರಮವಾಗಿದೆ. ನಾವು ಹತ್ತು ಅಂತಹ ಪ್ರಕರಣಗಳನ್ನು ನೋಡಿದ್ದೇವೆ ಮತ್ತು ಇದು ಹನ್ನೊಂದನೆಯದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮವಾಗಿದೆ" ಎಂದು ಹೇಳಿದ್ದಾರೆ.
ಐಪಿಸಿಯ ಸೆಕ್ಷನ್ 323, 498 ಎ, 504, 506, ಮತ್ತು 149 ರ ಅಡಿಯಲ್ಲಿ ಆರೋಪಗಳನ್ನು ಒಳಗೊಂಡಂತೆ ಆರೋಪಿಗಳಾದ ಕೋರಿ ಮಹಿಳೆಯ ಪತಿ ಮತ್ತು ಅತ್ತೆಯ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಾಗ ನ್ಯಾಯಾಲಯವು ಈ ತೀರ್ಪು ನೀಡಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಮಹಿಳೆ ಸಲ್ಲಿಸಿದ ಹತ್ತನೇ ದೂರಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮೂರ್ತಿ ಡಿ ನಾಯ್ಕ್ ಅವರು ಮಹಿಳೆಯ ಹಿಂದಿನ ದೂರುಗಳ ಪುರಾವೆಗಳನ್ನು ಸಲ್ಲಿಸಿದರು, ಅದನ್ನು ಪ್ರಾಸಿಕ್ಯೂಷನ್ ಪರಿಶೀಲಿಸಿದೆ ಎಂದು ನ್ಯಾಯಾಲಕ್ಕೆ ಮನವರಿಕೆ ಮಾಡಿಕೊಟ್ಟರು.
ನ್ಯಾಯಾಲಯವು ಎಲ್ಲಾ ಒಂಬತ್ತು ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿತು, ಹಲವಾರು ಪುರುಷರು ತಪ್ಪಾಗಿ ಆರೋಪಿಸಲ್ಪಟ್ಟಿದ್ದಾರೆ, ಬಂಧನದಲ್ಲಿದ್ದಾರೆ ಮತ್ತು ನಂತರ ದೂರುದಾರರಿಂದ ಸಾಕ್ಷ್ಯ ಅಥವಾ ಸಹಕಾರದ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿತ್ತು. ಮಹಿಳೆಯ ಕ್ರಮಗಳು ಆರೋಪಿಗೆ ಕಿರುಕುಳ ನೀಡುವ ಗುರಿಯನ್ನು ತೋರುತ್ತಿದೆ ಎಂದು ನ್ಯಾಯಾಲಯವು ಗಮನಿಸಿದೆ, ಆಕೆಯ ನಡವಳಿಕೆಯು ಹತ್ತಕ್ಕೂ ಹೆಚ್ಚಿನ ಪುರುಷರನ್ನು ಗುರಿಯಾಗಿಸುವ "ಹನಿ ಟ್ರ್ಯಾಪ್" ಎಂದು ವಿವರಿಸಿದೆ.
"ದೂರುದಾರರು ಯಾವುದೇ ಮಾನ್ಯ ಕಾರಣವಿಲ್ಲದೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ, ಇದು ಬಂಧನಗಳು ಮತ್ತು ವಿಚಾರಣೆಗಳಿಗೆ ಕಾರಣವಾಗುತ್ತದೆ, ಇವೆಲ್ಲವೂ ಖುಲಾಸೆಯಲ್ಲಿ ಕೊನೆಗೊಂಡಿವೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆಪಾದಿತ ಘಟನೆಗಳು ಆಗಸ್ಟ್ 28 ಮತ್ತು ಸೆಪ್ಟೆಂಬರ್ 22, 2022 ರ ನಡುವೆ ಸಂಭವಿಸಿವೆ.
Advertisement