ಕೊಪ್ಪಳ: ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಬಳಿ ಯಾವುದೇ ರೀತಿಯ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗೆ ನವಜೋಡಿಯೊಂದು ತುಂಗಭದ್ರಾ ಜಲಾಶಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರನ್ನು ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಕಾರಿನ ಮೇಲೆ, ಕಾರಿನ ಮುಂಭಾಗ ಜೋಡಿಗಳ ಫೋಟೋಶೂಟ್ ಮಾಡಲಾಗಿದೆ. ಈ ಫೋಟೋಗಳಪ ವೈರಲ್ ಆಗಿದ್ದು, ನಿಷೇಧವಿದ್ದರೂ ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಅನುಮತಿ ನೀಡಿದ್ದು ಯಾರು? ಅಧಿಕಾರಿಗಳೇ ಅನುಮತಿ ನೀಡಿದ್ದಾರಾ? ಬಿಗಿ ಭದ್ರತೆ ನಡುವಲ್ಲೂ ಈ ಜೋಡಿ ಒಳಗೆ ಹೋಗಿದ್ದು ಹೇಗೆ ಎಂಬುದರ ಬಗ್ಗೆ ಪ್ರಶ್ನೆಗಳು ಮೂಡಿವೆ.
ಅಂತಾರಾಷ್ಟ್ರೀಯ ಉಗ್ರಗಾಮಿಗಳ ಕಣ್ಣು ಜಲಾಶಯಗಳ ಮೇಲೆ ಇರುವುದರಿಂದ ತುಂಗಭದ್ರಾ ಜಲಾಶಯ, ಅಣೆಕಟ್ಟೆ ಮೇಲೆಯೂ ಪ್ರವೇಶಕ್ಕೆ ನಿರ್ಬಂಧವಿದೆ. ಪತ್ರಕರ್ತರು ಸೇರಿದಂತೆ ಯಾರಿಗೂ ಹೋಗಲು ಆವಕಾಶವಿಲ್ಲ. ವಿಶೇಷ ಸಂದರ್ಭದಲ್ಲಿ ಮಾತ್ರ ಸಚಿವರು, ಅಧಿಕಾರಿಗಳಿಗೆ ಪ್ರವೇಶ ನೀಡಲಾಗುತ್ತದೆ. ಬಾಗಿನ ಅರ್ಪಿಸುವ ವೇಳೆಯಲ್ಲಿ ಕಟ್ಟೆಚ್ಚರದ ನಡುವೆ ಅವಕಾಶ ನೀಡಲಾಗುತ್ತಿದೆ. ಆದರೂ, ಈ ನವಜೋಡಿ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿದ್ದರ ಕುರಿತು ಹಲವರು ಹುಬ್ಬೇರಿಸಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ತುಂಗಭದ್ರಾ ಜಲಾಶಯ ಕ್ರೆಸ್ಟ್ ಗೇಟ್ ನಂ.19 ಮುರಿದು ಬಿದ್ದ ಘಟನೆ ಬಳಿಕ ಸರ್ಕಾರ ಹಾಗೂ ರೈತರು ನೀರಿನ ಸಂಗ್ರಹ ಬಗ್ಗೆ ಚಿಂತಿತರಾಗಿದ್ದರು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ, ಫೋಟೋಶೂಟ್ ನಡೆಸಿದ ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಘಟನೆ ಕುರಿತು ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Advertisement