ಬೆಂಗಳೂರು: ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ನಡೆದ ಹಿಂಸಾಚಾರದ ಬೆನ್ನಲ್ಲೇ ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಗೆ ಬೆಂಗಳೂರು ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಹೌದು.. ಸೋಮವಾರ ಬೆಂಗಳೂರು ನಗರದಲ್ಲಿ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕೆಲ ಸೂಚನೆಗಳನ್ನು ಪೊಲೀಸರು ಹೊರಡಿಸಿದ್ದಾರೆ. ಒಂದು ವೇಳೆ ನಿಬಂಧನೆಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈದ್‌ಮಿಲಾದ್ ಹಬ್ಬದ ದಿನ ನಗರದಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಲಿದ್ದಾರೆ. ವೈ.ಎಂ.ಸಿ.ಎ. ಮೈದಾನ, ಮಿಲ್ಲರ್ನ ರಸ್ತೆ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಬಂಧ ಹಬ್ಬದ ದಿನದಂದು ಕೆಲವು ಸೂಚನೆಗಳನ್ನು ಪಾಲಿಸುವಂತೆ ಬೆಂಗಳೂರು ಪೊಲೀಸ್ ಆದೇಶ ಹೊರಡಿಸಿದೆ.
ಪೊಲೀಸ್ ಮಾರ್ಗಸೂಚಿಯಲ್ಲೇನಿದೆ?
ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚ್ ಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
ಮೆರವಣಿಗೆಯ ಸಮಯದಲ್ಲಿ ಆಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿನಂದಿಸುವ ಸಾಮಗ್ರಿಯನ್ನು ಇಟ್ಟುಕೊಂಡಿರಬೇಕು.
ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
ಹಿರಿಯ ನಾಗಕರಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಬೇಕು.
ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿ ಪಡೆದುಕೊಳ್ಳಬೇಕು.
ನಿಯಮ ಮೀರಿದರೆ ಕಾನೂನು ಕ್ರಮ
ಇದೇ ವೇಳೆ ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ಹೇಳಿದ್ದಾರೆ.
Advertisement