
ಚಿಕ್ಕಬಳ್ಳಾಪುರ: ನೀನಲ್ಲ, ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡಕ್ಕಾಗಲ್ಲ ಎಂದು ಸಂಸದ ಸುಧಾಕರ್'ಗೆ ಶಾಸಕ ಪ್ರದೀಪ್ ಈಶ್ವರ್'ಗೆ ಸವಾಲು ಹಾಕಿದ್ದಾರೆ.
ನಗರಸಭೆ ಚುನಾವೆಣೆ ಬಳಿಕ ಮಾತನಾಡಿದ ಅವರು, ಸುಧಾಕರ್ ಒಬ್ಬ ಕೋವಿಡ್ ಕಳ್ಳ. ಸುಧಾಕರ್‌ನನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ತಾಕತ್ತು, ದಮ್ಮು ಇದ್ದರೆ ಬಚಾವ್ ಆಗು ನೋಡೋಣ ಎಂದು ಏಕವಚನದಲ್ಲೇ ಸವಾಲು ಹಾಕಿದರು.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ 7-8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸಂಸದರು ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ನನ್ನ ಒಂದು ಕೂದಲನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ನಿನ್ನ ಅಖಾಡದಲ್ಲಿ ಬಂದು ನಾನು ನಿನ್ನನ್ನು ಹೊಡಿದಿದ್ದೇನೆ. ನಾನು ಒಬ್ಬ ಗಂಡಸು. ಮುಂದಿನ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇನೆ ಎಂದು ಹೇಳಿದರು.
ಶಾಸಕ ಪ್ರದೀಪ್ ಈಶ್ವರ್, ಸಂಸದ ಡಾ. ಕೆ.ಸುಧಾಕರ್ ಮಧ್ಯೆ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತದಾನ ನಡೆದಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಫಲಿತಾಂಶ ಕಾಯ್ದಿರಿಸಲಾಗಿದೆ. ಆದರೂ ಚುನಾವಣೆಯಲ್ಲಿ ಜಯಗಳಿಸಿದ್ದೇವೆ ಎಂದು ಬಿಜೆಪಿಯವರು ವಿಜಯೋತ್ಸವ ಆಚರಿಸಿದ್ದಾರೆ.
ಒಟ್ಟು 31 ಸದಸ್ಯ ಬಲದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ 9 ಸದಸ್ಯರು, 3 ಮಂದಿ ಪಕ್ಷೇತರರು, 6 ಜನ ಕಾಂಗ್ರೆಸ್ಸಿಗರು, ಸಂಸದರ ಮತ ಸೇರಿ ಬಿಜೆಪಿಗೆ ಒಟ್ಟು 19 ಮತಗಳು ಬಂದಿವೆ.
ಇನ್ನು ಕಾಂಗ್ರೆಸ್ 10 ಸದಸ್ಯರು, ಶಾಸಕ, ಎಂಎಲ್ಸಿ ಸೇರಿ 3, ಒಬ್ಬ ಪಕ್ಷೇತರ, ಇಬ್ಬರು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಒಟ್ಟು 16 ಮತಗಳನ್ನು ಪಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗುತ್ತಿದೆ.
ಶಾಸಕ ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಲು ಅರ್ಹರಲ್ಲ ಎಂದು ಡಾ. ಕೆ.ಸುಧಾಕರ್ ಬೆಂಬಲಿಗ ಹಾಗೂ ಮಾಜಿ ನಗರಸಭಾ ಸದಸ್ಯ ಆನಂದಬಾಬುರೆಡ್ಡಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಕಾರಣ ಮತದಾನಕ್ಕೆ ಅವಕಾಶ ನೀಡಿ, ಚುನಾವಣೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದರೂ ಫಲಿತಾಂಶ ರಿಟ್ ಅರ್ಜಿಯ ಫಲಿತಾಂಶಕ್ಕೆ ಒಳಪಟ್ಟಿರುವುದಾಗಿ ಆದೇಶಿಸಿತ್ತು. ಹಾಗಾಗಿ ಚುನಾವಣೆ ನಡೆದರೂ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಗೊಂಡಿಲ್ಲ.
ಈ ನಡುವೆ ಚುನಾವಣೆ ಬಳಿಕ ಮಾತನಾಡಿದ ಸುಧಾಕರ್ ಅವರು, ನಮ್ಮ ಸದಸ್ಯರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಬಹಳಷ್ಟು ಪ್ರಯತ್ನ ಮಾಡಿದರು. ಶಾಸಕ ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿವೆ. ಇವರ ಡ್ಯಾನ್ಸ್ ಹೀಗೆ ಮುಂದುವರೆಯಲಿ. ಇನ್ನೂ ಮೂರು ವರ್ಷ ಹೀಗೆ ಮಾಡಿ. ಆಮೇಲೆ ಈ ರಾಜ್ಯ ದೇಶದಲ್ಲಿ ಎಲ್ಲೂ ಅವಕಾಶ ಇರಲ್ಲ. ಪ್ಲೀಸ್ ನೋಟ್ ಮೈ ಪಾಯಿಂಟ್ ಎಂದು ಹೇಳಿದ್ದರು.
Advertisement