ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಶುಕ್ರವಾರ ಸೆಪ್ಟೆಂಬರ್ 17ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಬಳ್ಳಾರಿ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾಗೌಡ, ದೀಪಕ್, ತುಮಕೂರು ಜೈಲಿನಿಂದ ಅನುಕುಮಾರ್, ಜಗದೀಶ್ ಹಾಗೂ ರವಿ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 17 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು. ಹಾಜರಾಗುತ್ತಿದ್ದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸರತಿಯಂತೆ ಆರೋಪಿಗಳ ಹೆಸರು ಕೂಗಿ ಇರುವಿಕೆ ಬಗ್ಗೆ ಖಚಿತಪಡಿಸಿಕೊಂಡರು.
ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ''ಸಂಪೂರ್ಣ ಚಾರ್ಜ್ ಶೀಟ್ ಒದಗಿಸಿಲ್ಲ. ಡಿಜಿಟಲ್ ಎವಿಡೆನ್ಸ್ ಸಹ ಪೊಲೀಸರು ನೀಡಿಲ್ಲ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿಂತೆ ಸಿಆರ್ಪಿಸಿ 164 ಅಡಿ ಹೇಳಿಕೆ ನೀಡಿದ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ'' ಎಂದು ಕೋರ್ಟ್ ಗಮನಕ್ಕೆ ತಂದರು.
ಎಸ್ಪಿಪಿ ಪರ ವಕೀಲ ಪ್ರಸನ್ನ ಕುಮಾರ್, ''ಮುಂದಿನ ವಾರ ಡಿಜಿಟಲ್ ಎವಿಡೆನ್ಸ್ಗಳನ್ನು ಸಲ್ಲಿಸಲಾಗುವುದು'' ಎಂದು ಮಾಹಿತಿ ನೀಡಿದರು. ಬಳಿಕ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 17ರವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿತು.
Advertisement