
ಮೈಸೂರು: ಮುಂಬರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡ್ಯ ಜಿಲ್ಲೆಯ ನಾಗಮಂಗಲದ ಹಿಂಸಾಚಾರದ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಕೋಮುಗಲಭೆ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
1990ರ ದಶಕದಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರಾಜೀನಾಮೆಗೆ ಒತ್ತಾಯಿಸಿದಂತೆ ಇತ್ತೀಚಿನ ಹಿಂಸಾಚಾರವನ್ನು ಕಾಂಗ್ರೆಸ್ ಪ್ರಾಯೋಜಿಸಿದೆ ಎಂದು ಆರೋಪಿಸಿದರು.
ಗಲಭೆ ಪೀಡಿತ ಪಟ್ಟಣಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಇದು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದಂತೆಯೇ ಇದೆ, ಅಲ್ಲಿ ನಿಮಿಷಗಳಲ್ಲಿ ಭಾರಿ ವಿನಾಶ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದರು.
ಎಫ್‌ಐಆರ್ ಪ್ರತಿಯನ್ನು ಹಿಡಿದುಕೊಂಡ ಬಂದ ಕುಮಾರಸ್ವಾಮಿ, ಪೊಲೀಸ್ ದಾಖಲೆಯಲ್ಲಿ ಹಲವು ನ್ಯೂನತೆಗಳಿವೆ ಇಲ್ಲಿ ಪೊಲೀಸರು ಅಸಮರ್ಥರಾಗಿದ್ದಾರೆ. ಹಿಂಸಾಚಾರ ನಡೆದಾಗ ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್ ಪಿ ಸ್ಥಳದಲ್ಲಿ ಇರಲಿಲ್ಲ. ಅಧಿಕಾರಿಗಳು ಎಲ್ಲಿದ್ದರು? ಮೀಸಲು ಪೊಲೀಸರನ್ನು ಬೇರೆ ಪ್ರದೇಶಕ್ಕೆ ಏಕೆ ಸ್ಥಳಾಂತರಿಸಲಾಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹತ್ತು ನಿಮಿಷಗಳಲ್ಲಿ ದುಷ್ಕರ್ಮಿಗಳು ಕಲ್ಲು, ಕಬ್ಬಿಣದ ರಾಡ್‌ಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಹೇಗೆ ತಂದರು. ಘಟನೆಯ ಹಿಂದೆ ದೊಡ್ಡ ಪಿತೂರಿ ಇದೆ. ಇಷ್ಟು ದೊಡ್ಡ ಹಿಂಸಾಚಾರ ನಡೆದಿದ್ದನ್ನು ಗೃಹ ಸಚಿವ ಪರಮೇಶ್ವರ್ ಅವರು ಸಣ್ಣ ಘರ್ಷಣೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ಸಹ ಕುಮಾರಸ್ವಾಮಿ ಆರೋಪಿಸಿದರು.
ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದ್ದರೂ, ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಪಟ್ಟಣದಲ್ಲಿ ಉಭಯ ಧರ್ಮದ ಜನರು ಸೌಹಾರ್ದಯುತವಾಗಿ ಬಾಳುತ್ತಿದ್ದು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸಿಗರು ವಾತಾವರಣ ಹಾಳು ಮಾಡಬಾರದು. ಪೊಲೀಸರು ಮಾಡಿದ ಲೋಪಗಳನ್ನು ಬಹಿರಂಗಪಡಿಸಲು ಮತ್ತು ಹಿಂಸಾಚಾರದ ಹಿಂದಿನ ಹಿಡನ್ ಅಜೆಂಡಾ ಏನಿದೆ ಎಂದು ತಿಳಿದುಕೊಳ್ಳಲು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರ ಅಮಾನತು ಕೇವಲ ಕಣ್ಣಾಮುಚ್ಚಾಲೆ ಆಟ ಎಂದ ಅವರು, ಮೆರವಣಿಗೆಯಲ್ಲಿದ್ದ ಯುವಕರು 10 ನಿಮಿಷಗಳ ಕಾಲ ಪಟ್ಟಣದ ಮಸೀದಿ ಎದುರು ನೃತ್ಯ ಮಾಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದೇಕೆ ಎಂದರು.
ಬಳಿಕ ಸಚಿವ ಕುಮಾರಸ್ವಾಮಿ ಅವರು ಸಂತ್ರಸ್ತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಅನೇಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದು, ನಷ್ಟವನ್ನು ನಿರ್ಣಯಿಸಿ ಕನಿಷ್ಠ ಶೇಕಡಾ 70 ರಷ್ಟು ನೈಜ ನಷ್ಟವನ್ನು ಭರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿ 5 ಸದಸ್ಯರ ಸತ್ಯಶೋಧನಾ ಸಮಿತಿ: ನಾಗಮಂಗಲದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಬಿಜೆಪಿ ಐವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಸಮಿತಿಯು ವಾರದೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಅವರು ಡಾ.ಸಿ.ಎನ್.ಅಶ್ವಥ್ ನಾರಾಯಣ್, ಬೈರತಿ ಬಸವರಾಜ್, ಕೆ.ಸಿ.ನಾರಾಯಣಗೌಡ, ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನಿಗೌಡ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನೊಳಗೊಂಡ ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
Advertisement