ಕೊಪ್ಪಳ: ಹಣಕ್ಕಾಗಿ ಬೇರೆಯವರಿಗೆ ನೂರಾರು ಫೋನ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕೊಪ್ಪಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಸಿಹೆಚ್ ಕೊಟೆಪ್ಪ (44)ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ವರದಿಯ ಪ್ರಕಾರ, ಆರೋಪಿ ಕಾನ್ಸ್ ಟೇಬಲ್ 145 ಜನರ ಮೊಬೈಲ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಒಂಬತ್ತು ಮೊಬೈಲ್ ಟವರ್‌ಗಳಿಗೆ ಸೇರಿದ ಸೆಲ್ ಐಡಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಚಾಟ್‌ಗಳು ಮತ್ತು ದೂರವಾಣಿ ಸಂಭಾಷಣೆಯಂತಹ ಖಾಸಗಿ ಮಾಹಿತಿಯನ್ನು ಬೇರೆ ಬೇರೆ ಕ್ಲೈಂಟ್ ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ವ್ಯಕ್ತಿ ಯಾರು ಮತ್ತು ಆರೋಪಿ ಕಾನ್‌ಸ್ಟೆಬಲ್‌ಗೆ ಎಷ್ಟು ಪಾವತಿಸಲಾಗಿದೆ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಕಾನೂನು ಹೋರಾಟ ನಡೆಸುತ್ತಿರುವ ಕ್ಲೈಂಟ್ ಒಬ್ಬರ ಸಂಭಾಷಣೆ ಸೋರಿಕೆಯಾದ ನಂತರ ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲೀಸರಿಗೆ ವಿಚಾರಿಸಿದಾಗ ಅವರಲ್ಲಿಯೇ ಯಾರೋ ಒಬ್ಬರು ಇರುವುದು ಗೊತ್ತಾಯಿತು. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
"ಈ ರೀತಿಯ ಮೊದಲ ಪ್ರಕರಣ ಇದಾಗಿದೆ. ಒಬ್ಬ ವ್ಯಕ್ತಿಗೆ ಸೇರಿದ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಕೃತ್ಯದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವುದನ್ನು ನಾವು ನೋಡಿಲ್ಲ. ಕಾನ್‌ಸ್ಟೆಬಲ್ ಕೆಲವು ವಕೀಲರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅವರು ತಮ್ಮ ಎದುರಾಳಿಯ ಸಂಭಾಷಣೆಯನ್ನು ವಕೀಲರಿಗೆ ನಿಯಮಿತವಾಗಿ ಒದಗಿಸುತ್ತಿದ್ದರು. ದಂಪತಿಗಳೊಂದಿಗಿನ ಯಾವುದೇ ಖಾಸಗಿ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗಿದೆಯೇ ? ಅದನ್ನು ಸಾಮಾಜಿಕ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿ ಕಾನ್‌ಸ್ಟೆಬಲ್ ತನ್ನ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಹೊಸ ಟೆಂಡರ್‌ಗಳು, ಅಭಿವೃದ್ಧಿಗೆ ಬರುವ ಹಣ, ಸಮವಸ್ತ್ರ ಮತ್ತು ಇತರ ಕೆಲಸಗಳಂತಹ ಹಲವಾರು ಮಾಹಿತಿಯನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರಿಗೆ ಕಳುಹಿಸಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಟೆಲಿಫೋನ್ ರೆಕಾರ್ಡಿಂಗ್ ಬಹಿರಂಗಪಡಿಸಲು ಆರೋಪಿಯು 2,000 ರಿಂದ 10,000 ರೂ.ವರೆಗೆ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement