ಯಾದಗಿರಿ/ಕಲಬುರಗಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರ್ಗಾ ಗ್ರಾಮದಲ್ಲಿ ಮೇಲ್ಜಾತಿಯವರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ದೈಹಿಕ ಸಂಬಂಧ ಬೆಳೆಸಿ ಆಕೆ ಗರ್ಭವತಿಯಾಗಲು ಮೇಲ್ಜಾತಿಯ ಯುವಕ ಕಾರಣನಾಗಿದ್ದಾನೆ ಎಂದು ಬಾಲಕಿಯ ತಾಯಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾಳೆ.
ಆಗಸ್ಟ್ 14 ರಂದು ನಾರಾಯಣಪುರ ಪೊಲೀಸರಿಗೆ ದೂರು ನೀಡಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ. ದಲಿತ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಮೇಲ್ಜಾತಿ ಯುವಕ ದೈಹಿಕ ಸಂಬಂಧ ಬೆಳೆಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿ ಗರ್ಭಿಣಿ ಎಂದು ತಿಳಿದ ಬಳಿಕ ಆಕೆಯನ್ನು ಸಂಪರ್ಕಿಸುವುದನ್ನು ನಿಲ್ಲಿಸಿದ್ದಲ್ಲದೆ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಯುವಕ ಬಾಲಕಿ ಮನೆಯವರಿಗೆ ಸಂದೇಶ ಕಳುಹಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲವು ದಿನಗಳ ಹಿಂದೆ ಬಪ್ಪರ್ಗಾದಲ್ಲಿ ಮೇಲ್ವರ್ಗದವರನ್ನು ಸಂಪರ್ಕಿಸದೆ ಬಾಲಕಿಯ ಕುಟುಂಬದವರು ದೂರು ದಾಖಲಿಸಿದ್ದರಿಂದ ಮೇಲ್ಜಾತಿ ಸಮುದಾಯದ ಗ್ರಾಮಸ್ಥರು ಸಭೆ ನಡೆಸಿ ದಲಿತರಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಾಮದ ದಲಿತ ಯುವಕ ಪರಶುರಾಮ್, ದಲಿತರಿಗೆ, ವಿಶೇಷವಾಗಿ ಹುಡುಗಿಯ ಕುಟುಂಬಕ್ಕೆ ಏನನ್ನೂ ಮಾರಾಟ ಮಾಡದಂತೆ ಮೇಲ್ಜಾತಿ ಸಮುದಾಯದವರು ಗ್ರಾಮದ ಕಿರಾಣಿ ಅಂಗಡಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
ಮೊನ್ನೆ ಗುರುವಾರ, ಬಾಲಕಿಯ ಕುಟುಂಬಸ್ಥರು ದಿನಸಿ ಖರೀದಿಸಲು ಅಂಗಡಿಗೆ ಹೋದಾಗ, ಮತ್ತೊಬ್ಬ ದಲಿತ ತನ್ನ ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನುಗಳನ್ನು ಖರೀದಿಸಲು ಸ್ಟೇಷನರ್‌ಗೆ ಹೋದಾಗ, ಅಂಗಡಿ ಮಾಲೀಕರು ದಲಿತರಿಗೆ ದಿನಸಿ ಅಥವಾ ಬೇರೆ ಸಾಮಗ್ರಿಗಳನ್ನು ಮಾರಾಟ ಮಾಡಲು ನಿರಾಕರಿಸಿದರು. ಗ್ರಾಮದಲ್ಲಿ ದಲಿತರಿಗೆ ಯಾವುದೇ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ನಿರ್ಧರಿಸಿದ್ದಾರೆ ಎಂದು ಪರಶುರಾಮ್ ಹೇಳಿದರು.
ಮೇಲ್ವರ್ಗದವರ ಆದೇಶಗಳನ್ನು ಉಲ್ಲಂಘಿಸಿದರೆ ದಲಿತರಿಗೆ ತೊಂದರೆಯಾಗುತ್ತದೆ ಎಂದು ಅಂಗಡಿ ಮಾಲೀಕರು ದಲಿತರಿಗೆ ಹೇಳಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾದಗಿರಿ ಜಿಲ್ಲಾಧಿಕಾರಿ ಪಿ ಸುಶೀಲಾ ಅವರನ್ನು ಈ ಬಗ್ಗೆ ಕೇಳಿದಾಗ, ಹುಣಸಗಿ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡ್ ಹಾಗೂ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಎರಡೂ ಸಮುದಾಯದವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದರು.
ನಾಯ್ಕೋಡೆ ಅವರು ನಿನ್ನೆ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಎರಡೂ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದರು.
ಜಿಲ್ಲಾಡಳಿತದಿಂದ ವರದಿ ಕೇಳಿದ್ದು, ಅಗತ್ಯ ಬಿದ್ದರೆ ಗ್ರಾಮಕ್ಕೆ ಭೇಟಿ ನೀಡಿ ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿ, ದಲಿತರಿಗೆ ಬಹಿಷ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ದಲಿತರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.
Advertisement