
ಹೊಸಪೇಟೆ: ವಿಶಾಲ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು 50 ವಸಂತಗಳನ್ನು ಪೂರೈಸಿದ ನೆನಪಿಗಾಗಿ ರಾಜ್ಯ ಸರ್ಕಾರ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ನಡೆಸಿತ್ತು. ಈ ಕಾರ್ಯಕ್ರಮ ನಡೆದು 10 ತಿಂಗಳುಗಳು ಕಳೆದರೂ ಕಾರ್ಯಕ್ರಮದಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದ 800ಕ್ಕೂ ಹೆಚ್ಚು ಕಲಾವಿದರಿಗೆ ಇನ್ನು ಸಂಭಾವನೆ ಸಿಕ್ಕಿಲ್ಲ.
ಕಳೆದ ನವೆಂಬರ್‌ನಲ್ಲಿ ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಆದರೆ, 10 ತಿಂಗಳು ಕಳೆದರೂ ಸರ್ಕಾರ ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಕಲಾವಿದರು ಮುಂದಾಗಿದ್ದಾರೆ.
ಆರು ಸದಸ್ಯರ ಗುಂಪಿಗೆ 15,000 ರಿಂದ 20,000 ರೂ.ವರೆಗೆ ಸಂಭಾವನೆ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಕಾರ್ಯಕ್ರಮ ಮುಗಿದ ಕೆಲವೇ ದಿನಗಳಲ್ಲಿ ಬೇರೆ ಜಿಲ್ಲೆಗಳ ಗುಂಪುಗಳು ಸಂಭಾವನೆ ಪಡೆದರೂ ವಿಜಯನಗರದವರಿಗೆ ಇನ್ನೂ ಸಂಭಾವನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲ ಕಲಾವಿದರಿಗೆ ಭರವಸೆಯಂತೆ ಸಂಭಾವನೆ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕಲಾವಿದರಿಗೆ ಶೀಘ್ರದಲ್ಲಿ ಹಣ ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಎಂಟು ತಿಂಗಳಿಂದ ಹಣಕ್ಕಾಗಿ ಕಾಯುತ್ತಿದ್ದೇನೆ ಎಂದು ಕಲಾವಿದರೊಬ್ಬರು ಹೇಳಿದ್ದಾರೆ. ಸಂಭಾವನೆ ಸಂಬಂಧ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಸಾಧ್ಯವಾದಷ್ಟು ಬೇಗ ಹಣವನ್ನು ಬಿಡುಗಡೆ ಮಾಡಲಾಗುವುದು ಹೇಳುತ್ತಾರೆ. ಆದರೆ, ನೀಡುವುದಿಲ್ಲ. ಕಲಾ ಪ್ರದರ್ಶನ ಸಂದರ್ಭದಲ್ಲಿ ಬಳಸಬೇಕಾದ ವಸ್ತು ಖರೀದಿಗೆ ಸಾಲ ಮಾಡಿರುತ್ತೇವೆ. ಆ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಸರ್ಕಾರ ಹಣ ನೀಡುತ್ತಿಲ್ಲ. ಜಿಲ್ಲಾಡಳಿತ ಕೂಡ ಹಣ ನೀಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement