ಮೈಸೂರು: ಗಲಭೆ ಪೀಡಿತ ನಾಗಮಂಗಲಕ್ಕೆ ಬಿಜೆಪಿಯ ಸತ್ಯಶೋಧನಾ ಸಮಿತಿ ಸದಸ್ಯರು ಸೋಮವಾರ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
ಬಿಜೆಪಿ ಸತ್ಯಶೋಧನಾ ಸಮಿತಿಯ ನೇತೃತ್ವ ವಹಿಸಿರುವ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ್ ಅವರು, ಪಕ್ಷದ ಮುಖಂಡರಾದ ಭೈರತಿ ಬಸವರಾಜ್, ಭಾಸ್ಕರ್ ರಾವ್, ನಾರಾಯಣ್ ಗೌಡ ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಅವರೊಂದಿಗೆ ಪಟ್ಟಣಕ್ಕೆ ಭೇಟಿ ನೀಡಿದರು.
ಈ ವೇಳೆ ತಂಡವು ಹಿಂಸಾಚಾರದಲ್ಲಿ ಸುಟ್ಟುಹೋದ ಅಂಗಡಿಗಳನ್ನು ಪರಿಶೀಲಿಸಿತು, ಹಾನಿಗೊಳಗಾದ ಪ್ರದೇಶಗಳು ಮತ್ತು ಬಂಧಿತರ ಕುಟುಂಬಗಳನ್ನು ಭೇಟಿ ಮಾಡಿತು.
ಬಳಿಕ ಮಾತನಾಡಿದ ಅಶ್ವತ್ಥ್ ನಾರಾಯಣ್ ಅವರು, ಮಂಡ್ಯ ಜಿಲ್ಲೆ ನಾಗಮಂಗಲ ಗಲಭೆ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಮಗ್ರ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.
ನಾಗಮಂಗಲದ ಘಟನೆ ಹಿಂದಿರುವ ಕಾಣದ ಕೈಗಳ ಪತ್ತೆ ಮಾಡಬೇಕು. ಇದನ್ನು ತಿಳಿಯಲು ಸತ್ಯಶೋಧನಾ ಸಮಿತಿ ರಚನೆ ಮಾಡಿಕೊಂಡಿದ್ದೇವೆ. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಕೇರಳದ ಇಬ್ಬರು ನಾಗಮಂಗಲ ಗಲಭೆಯಲ್ಲಿ ಶಾಮೀಲಾಗಿದ್ದಾರೆ. ಗಲಾಟೆಯಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಗಣೇಶ ಮೂರ್ತಿಯನ್ನೇ ಅರೆಸ್ಟ್ ಮಾಡುತ್ತಾರೆ ಅಂದರೆ ಅವರ ಮನಸ್ಥಿತಿ ಹೇಗಿದೆ? ಜನರಿಗೆ ನಿಜ ಏನೆಂಬುದನ್ನು, ಪರಿಸ್ಥಿತಿಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು ಪಕ್ಷದ ನಾಯಕತ್ವ ಮತ್ತು ಸರ್ಕಾರಕ್ಕೆ ಸಲ್ಲಿಸಲಿದ್ದು, ವರದಿಯು ಸತ್ಯಗಳ ಆಧಾರದ ಮೇಲೆ ಹಿಂಸಾಚಾರದ ಕಾರಣಗಳ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಪ್ಪಿಸುವ ಮಾರ್ಗಗಳನ್ನು ಸಹ ಸೂಚಿಸುತ್ತದೆ. ವರದಿಯು ಈ ಪ್ರದೇಶದಲ್ಲಿ ಪೊಲೀಸ್ ವೈಫಲ್ಯ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಎತ್ತಿ ತೋರಿಸುತ್ತದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರು ನಡೆಸಿದ ಯತ್ನದ ಕುರಿತು ಮಾತನಾಡಿ, ಪೊಲೀಸರು ಗಲಾಟೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ದೇಶಕ್ಕಾಗಿ ದುಡಿಯುತ್ತಿರುವ ಅಮಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮುಖಂಡ ಸುಬ್ಬಾರೆಡ್ಡಿ, ವಕೀಲರೊಂದಿಗೆ ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಗಲಭೆಯ ಹಿಂದೆ ಪಿಎಫ್‌ಐ ಕೈವಾಡವಿದೆ ಎಂದು ಆರೋಪಿಸಿದರು.
ಇದೇ ವೇಳೆ ಬಂಧನದ ಭೀತಿಯಿಂದ ಪಟ್ಟಣದಿಂದ ಪಲಾಯನ ಮಾಡಿದ 400 ಜನರಿಗೆ ನಿರೀಕ್ಷಣಾ ಜಾಮೀನು ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
Advertisement