ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರೊಂದಿಗೆ ಕೈಜೋಡಿಸಿ ಮೈಸೂರಿನಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಸೋಮವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸರಿಲ್ಲಿದ್ದ ಜಂಟಿ ಜಾಗ. ಈರನಗೆರೆ ಸರ್ವೆ ನಂ 85/2 ರಲ್ಲಿ 1 ಎಕರೆ 3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ. ಅರ್ಜಿ ಸಲ್ಲಿಸಿದ ಬಳಿಕ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ ಮಾಡಲಾಗಿದೆ.
50 ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಸಿ. ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದಿನ ಬಿಜೆಪಿ ಜಿಲ್ಲಾಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮ ಎಸಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದಲ್ಲಿ ಮಹಾದೇವಸ್ವಾಮಿ ಗುರುತಿಸಿಕೊಂಡಿದ್ದು, ಎಲ್.ಆರ್. ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ಹೆಚ್ಚುವರಿಯಾಗಿ ಸರಸ್ವತಿಪುರಂನಲ್ಲಿ 50x80 ಹೆಚ್ಚುವರಿ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅದೇ ಬಡಾವಣೆ ಬಿಟ್ಟು ಕೋಟಿ ಕೋಟಿ ಬೆಲೆ ಬಾಳುವ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಇದೇ ನಿವೇಶನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ನಿವೇಶನ ಖರೀದಿಸಿದ್ದಾರೆ.
ಮಾರುಕಟ್ಟೆ ಮೌಲ್ಯದ ಪ್ರಕಾರ, ಸೈಟ್ 7 ಕೋಟಿ ರೂ.ಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆ, ಆದರೆ ಸೌಮ್ಯ ಅದನ್ನು 5.36 ಲಕ್ಷಕ್ಕೆ ಖರೀದಿಸಿದ್ದಾರೆ. ನಟೇಶ್ ಮತ್ತು ಮಹದೇವಸ್ವಾಮಿ ಅವರು ವಿಜಯೇಂದ್ರ ಅವರ ಆಪ್ತರಾಗಿರುವ ಕಾರಣ, ಕೋಟ್ಯಾಂತರ ಬೆಲೆ ಬಾಳುವ ಪ್ರದೇಶದಲ್ಲಿ ನಿವೇಶನ ಪಡೆಯಲು ಸಂಚು ರೂಪಿಸಲಾಗಿದೆ. ಇದೀಗ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಕೂಡಲೇ ಈ ನಿವೇಶನವನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಮುಡಾ ಭ್ರಷ್ಟಾಚಾರದ ಪಿತಾಮಹ ಬಿ.ವೈ. ವಿಜಯೇಂದ್ರ. 2021 ರಲ್ಲಿ ವಿಜಯೇಂದ್ರ ಪಟಾಲಮ್ ಮೂಲಕ ಭ್ರಷ್ಟಾಚಾರ ಮಾಡಿದ್ದರು. ಡಿ.ಬಿ. ನಟೇಶ್ ಮುಡಾ ಮಾಜಿ ಆಯುಕ್ತ, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ದೇವಸ್ಥಾನಗಳಿಗೆ ಹೆಲಿಕಾಪ್ಟರ್ ನಲ್ಲಿ ಹೊಗುತ್ತಾ ಇದ್ದರು ಎಂದು ಆರೋಪಿಸಿದರು.
Advertisement