

ಮಂಗಳೂರು: ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್ ದಾನ ಮಾಡಿ ಅವರ ಜೀವ ಉಳಿಸಿದ್ದ ಉಪನ್ಯಾಸಕಿ ಅರ್ಚನಾ ಕಾಮತ್ ಎಂಬವರು ಭಾನುವಾರ ಸಾವನ್ನಪ್ಪಿದ್ದಾರೆ.
ತನ್ನ ಪತಿಯ ಸಂಬಂಧಿ ಮಹಿಳೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಲಿವರ್‌ನ ಅಗತ್ಯವಿತ್ತು. ಅವರಿಗೆ ಲಿವರ್ ದಾನ ಮಾಡಲೆಂದು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ತಪಾಸಣೆಗೆ ಒಳಪಟ್ಟವರ ಪೈಕಿ ಯಾರೊಬ್ಬರ ರಕ್ತದ ಗುಂಪು ಕೂಡ ಹೊಂದಾಣಿಕೆಯಾಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗಾಗಿ ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರ ಪಿತ್ತಜನಕಾಂಗವನ್ನು ತೆಗೆದು, ಇನ್ನೊಬ್ಬರಿಗೆ ಕಸಿ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ವಿಶ್ರಾಂತಿ ಬಳಿಕ ಕರಂಗಲ್ಪಾಡಿಯ ಮನೆಗೆ ಹಿಂತಿರುಗಿದ್ದರು.
ಆ ಬಳಿಕ ಅರ್ಚನಾ ಕಾಮತ್ ಆರೋಗ್ಯ ಏರುಪೇರಾಗಿತ್ತು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಕರಂಗಲ್ಪಾಡಿಯಲ್ಲಿ ಅಂತಿಮ ವಿಧಿಗಳನ್ನು ಮುಗಿಸಿ ಅವರ ತವರೂರಾದ ಕುಂದಾಪುರದ ಕೋಟೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ನಗರದ ಹೊರವಲಯದ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅರ್ಚನಾ ಅವರು ಪತಿ ಸಿಎ ಚೇತನ್ ಕುಮಾರ್ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ. ಅರ್ಚನಾ ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.