ಬೆಂಗಳೂರು: ಹೂಡಿಕೆ, ಆವಿಷ್ಕಾರಗಳು ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಸಮಗ್ರ ರಾಜ್ಯ ಬಾಹ್ಯಾಕಾಶ ನೀತಿಯನ್ನು ಕರ್ನಾಟಕ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಉದ್ಯಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯವನ್ನು ಕೇಂದ್ರವಾಗಿಸಲು ಹಲವು ಪ್ರಯತ್ನಗಳನ್ನು ನಡೆಯುತ್ತಿವೆ. "ನಾವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪಾಲನ್ನು ನಿಯಂತ್ರಿಸುವ ಮೂಲಕ US $ 17 ಶತಕೋಟಿ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆಯು ಬೆಂಗಳೂರಿನಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಎಕ್ಸ್‌ಪೋ 2024ರಲ್ಲಿ ಭಾಗವಹಿಸುತ್ತಿದ್ದು ಉದ್ಘಾಟನ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕದ ಬದ್ಧತೆಯನ್ನು ಎತ್ತಿ ತೋರಿಸಲು ಸಜ್ಜಾಗಿದೆ ಎಂದು ಬಾಹ್ಯಾಕಾಶ ಶಕ್ತಿ ಕೇಂದ್ರದ ಕುರಿತು ತಮ್ಮ ಭಾಷಣದಲ್ಲಿ ಸಚಿವರು ಉಲ್ಲೇಖಿಸಿದರು, ಕರ್ನಾಟಕವು ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರ್ಕಾರಿ ನೀತಿ, ಎಂಎಸ್‌ಎಂಇ ಬೆಂಬಲ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ ಎಂದೂ ಸಚಿವರು ತಿಳಿಸಿದರು.
ಬಾಹ್ಯಾಕಾಶ ಉದ್ಯಮದಲ್ಲಿ ರಾಜ್ಯವು ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದೆ. ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವ್ಯಾಪಾರದ ಪ್ರಾರಂಭಕ್ಕಾಗಿ ಸರ್ಕಾರ ಬೆಂಬಲ ನೀಡುತ್ತಾ ಬರುತ್ತಿದೆ ಎಂದು ಹೇಳಿದ ಸಚಿವರು ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರತ್ಯೇಕ ರಾಜ್ಯ ನೀತಿ, ಹೂಡಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಕೆಲಸದಲ್ಲಿ ಸರ್ಕಾರ ನಿರತವಾಗಿದ್ದು, ಬಾಹ್ಯಾಕಾಶ ತಂತ್ರಜ್ಞಾನಗಳ ಕೇಂದ್ರವನ್ನು ಸ್ಥಾಪಿಸುವತ್ತ ಗಮನ ಹರಿಸಿದೆ ಎಂದೂ ಪ್ರಕಟಿಸಿದರು.
ಗಮನಾರ್ಹವಾಗಿ, ಬೆಂಗಳೂರು ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ಅಪ್ ಪಿಕ್ಸ್‌ಸೆಲ್ ಇತ್ತೀಚೆಗೆ ನಾಸ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರ $476 ಮಿಲಿಯನ್ ವಾಣಿಜ್ಯ ಕಾರ್ಯಕ್ರಮಕ್ಕೆ ಸೇರಿಕೊಂಡಿದೆ, ಈ ಮೈಲಿಗಲ್ಲು ಇಸ್ರೋದ ಬಾಹ್ಯಾಕಾಶ ಸ್ಟಾರ್ಟ್ಅಪ್ ಹಬ್‌ನಿಂದ ಕರ್ನಾಟಕದ ವಿಕಾಸವನ್ನು ಒತ್ತಿಹೇಳುತ್ತದೆ, ಬಾಹ್ಯಾಕಾಶ ವಲಯದಲ್ಲಿ ಅದರ ಜಾಗತಿಕ ನಾಯಕತ್ವವನ್ನು ಪುನರುಚ್ಚರಿಸುತ್ತದ ಎಂದೂ ಸಚಿವರು ಹೇಳಿದರು.
ಬೆಂಗಳೂರು ಬಾಹ್ಯಾಕಾಶ ಎಕ್ಸ್‌ಪೋ 2024 ಮೂಲಕ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಗುರಿಯನ್ನು ಪೂರೈಸುವಲ್ಲಿ ರಾಜ್ಯದ ಬದ್ಧತೆಯನ್ನು ತೋರಿಸಲಾಗುತ್ತಿದ್ದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಪ್ರದರ್ಶಿಸಲು ಇದೊಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Advertisement