
ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚೂರಿ ಇರಿತದ ನಂತರ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದ ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ಮೆರವಣಿಗೆ ಮುಗಿದ ನಂತರ ವಾಪಸ್ಸಾಗುತ್ತಿದ್ದ ಸಂತ್ರಸ್ತರನ್ನು ಬೆನ್ನಟ್ಟಿದ್ದ ಆರೋಪಿಗಳು ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಕುವಿನಿಂದ ಇರಿದಿದ್ದರು ಎಂದು ಮೂಲಗಳು ಹೇಳಿವೆ.
ಬೈಕ್ ನಲ್ಲಿ ಪರಾರಿಯಾಗಿದ್ದ ಆರೋಪಿಗಳ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ್ದ ಪೊಲೀಸರು ವಿಶ್ವೇಶ್ವರಯ್ಯ ನಗರದ ಬಳಿ ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ದರ್ಶನ್ ಪಾಟೀಲ್, ಸತೀಶ್ ಪೂಜಾರಿ ಮತ್ತು ಪ್ರವೀಣ ಗುಂಡ್ಯಾಗೋಳ ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿಗಳು ಮೂವರ ಯುವಕರ ಹೊಟ್ಟೆಬಾಗಕ್ಕೆ ಚೂರಿ ಇರಿದ್ದು ಪರಾರಿಯಾಗಿದ್ದರು. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಾಥಮಿಕ ವರದಿ ಪ್ರಕಾರ ಗಣಪತಿ ವಿಸರ್ಜನೆ ವೇಳೆಯಲ್ಲಿ ಡಿಜೆ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿದ್ದಾಗ ಮೂವರ ವಿರುದ್ಧ ದಾಳಿಯಾಗಿದೆ ಎನ್ನಲಾಗಿದೆ. ಆದರೆ, ವಿಸರ್ಜನಾ ಮೆರವಣಿಗೆ ಮುಗಿದ ಬಳಿಕ ದಾಳಿ ಘಟನೆ ನಡೆದಿರುವುದಾಗಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸ್ಪಷ್ಟಪಡಿಸಿದ್ದಾರೆ.
ಮೆರವಣಿ ವೇಳೆಯಲ್ಲಿ ದಾಳಿ ನಡೆದಿಲ್ಲ. ಗಲಾಟೆ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ್ದರು. ನಂತರ ಸಂತ್ರಸ್ತರನ್ನು ಬೆನ್ನಟ್ಟಿದ್ದ ಆರೋಪಿಗಳು ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಕುವಿನಿಂದ ಇರಿದಿದ್ದಾರೆ. ಈ ಸಂಬಂಧ ಐವರ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುರಿ, ಮಹೇಶ ಮತ್ತು ವಿಜಯ ಎಂದು ಗುರುತಿಸಲಾಗಿದೆ. ಸಂತ್ರಸ್ತರು ಹಾಗೂ ಆರೋಪಿಗಳ ನಡುವೆ ಹಳೆಯ ದ್ವೇಷವಿತ್ತು. ಗಣೇಶ ವಿಸರ್ಜನೆ ವೇಳೆಯಲ್ಲಿ ಡ್ಯಾನ್ಸ್ ಮಾಡುವಾಗ ಕೈ ತಗುಲಿದ್ದಕ್ಕೆ ಜಗಳ ಆರಂಭವಾಗಿರುವುದು ಪೊಲೀಸರ ಪ್ರಥಾಮಿಕ ವರದಿಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.
ಸದ್ಯ ಗಾಯಾಳುಗಳನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಕೇಸ್ ಎಂಪಿಎಂಸಿ ಪೊಲೀಸ್ ಠಾಣೆಯಿಂದ ಖಾಡೇ ಬಜಾರ್ ಠಾಣೆಗೆ ವರ್ಗಾವಣೆಯಾಗಿದೆ ಎಂದು ಯಡಾ ಮಾರ್ಟಿನ್ ತಿಳಿಸಿದರು.
Advertisement