ಬೆಂಗಳೂರು: 24ರ ಯುವತಿಗೆ 58 ವರ್ಷದ ಉದ್ಯಮಿ ಪ್ರೇಮ ನಿವೇದನೆ; ಪ್ರಿಯಕರನಿಂದ ಇರಿತ
ಬೆಂಗಳೂರು: ಬಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಅಡಿ ಪ್ರೇಮಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್‌ನ ಉಡುಪಿ ಗಾರ್ಡನ್ ಸಿಗ್ನಲ್ ಬಳಿಯ ಕೆಇಬಿ ಪಾರ್ಕ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ.
ಜಯನಗರ 9ನೇ ಬ್ಲಾಕ್‌ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಹಿತೇಂದ್ರ ಕುಮಾರ್ ತನ್ನ 24 ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಆಕೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ, ಜೊತೆಗೆ ಆಕೆಗೆ ಹೊಸ ಮನೆಯನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ. ಈ ವರ್ಷದ ಜೂನ್‌ನಲ್ಲಿ ಮಹಿಳೆ ಹಿತೇಂದ್ರ ಕುಮಾರ್ ಅವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಸ್ಲಲ್ಪ ದಿನಗಳ ನಂತರ ಹಿತೇಂದ್ರ ಕುಮಾರ್ ಆಕೆಗೆ ಪ್ರೇಮ ನಿವೇದನೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ, ಕಿರುಕುಳದಿಂದ ತಪ್ಪಿಸಿಕೊಳ್ಳಲು ಎರಡು ತಿಂಗಳೊಳಗೆ ತನ್ನ ಕೆಲಸವನ್ನು ತೊರೆದಳು. ಇಷ್ಟಾದರೂ ಕುಮಾರ್ ಆಕೆಗೆ ಕರೆ ಮಾಡಿ ಪ್ರಪೋಸ್ ಮಾಡುತ್ತಿದ್ದ.
ಕಿರುಕುಳ ತಾಳಲಾರದೆ ಮಹಿಳೆ ತನ್ನ ಪ್ರಿಯಕರ ಸಿದ್ದು(28)ಗೆ ಮಾಹಿತಿ ನೀಡಿದ್ದಾಳೆ. ನಂತರ ಇಬ್ಬರೂ ಕುಮಾರ್‌ಗೆ ಪಾಠ ಕಲಿಸಲು ಸಂಚು ರೂಪಿಸಿದರು. ಪ್ಲಾನ್ ಪ್ರಕಾರ, ಶುಕ್ರವಾರ ಕುಮಾರ್ ಆಕೆಗೆ ಕರೆ ಮಾಡಿದಾಗ, ಆಕೆ ಉದ್ಯಮಿಯ ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಂಡು ಪಾರ್ಕ್ ನಲ್ಲಿ ಭೇಟಿಯಾಗುವಂತೆ ತಿಳಿಸಿದ್ದಾಳೆ. ಇದರಿಂದ ಸಂತೋಷಗೊಂಡ ಹಿತೇಂದ್ರ ಕುಮಾರ್ ಅವಳನ್ನು ಭೇಟಿಯಾಗಲುಆಗಮಿಸಿದ್ದ. ಈ ವೇಳೆ ತನಗೆ ತೊಂದರೆ ನೀಡದಂತೆ ಮಹಿಳೆ ಎಚ್ಚರಿಕೆ ನೀಡಿದ್ದಳು. ಅವರು ಮಾತನಾಡುತ್ತಿರುವಾಗ, ಮರದ ಹಿಂದೆ ಕಾಯುತ್ತಿದ್ದ ಸಿದ್ದು, ತನ್ನ ಗೆಳತಿಗೆ ತೊಂದರೆ ನೀಡಿದ್ದಕ್ಕಾಗಿ ಕುಮಾರ್‌ನೊಂದಿಗೆ ಜಗಳವಾಡಿದನು. ನಂತರ ನಡೆದ ತೀವ್ರ ವಾಗ್ವಾದದಲ್ಲಿ, ಸಿದ್ದು ಚಾಕುವನ್ನು ಹೊರತೆಗೆದು ಅನೇಕ ಬಾರಿ ಇರಿದಿದ್ದಾನೆ. ಉದ್ಯಾನವನದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿತೇಂದ್ರಕುಮಾರ್ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ಸುದ್ದಗುಂಟೆಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ