
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಗೋವಾ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ತಡೆಯೊಡ್ಡುತ್ತಿದೆ. ಇದೀಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿತಂತ್ರ ರೂಪಿಸಿದ್ದು ಕಳಸಾ ಯೋಜನೆಯನ್ನು ನೀವು ವಿರೋಧಿಸಿದರೆ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾದು ಹೋಗಲಿರುವ ಗೋವಾ-ತಮ್ನಾರ್ ಪ್ರಸರಣ ಯೋಜನೆಗೆ ಕರ್ನಾಟಕ ತನ್ನ ಅನುಮೋದನೆಯನ್ನು ತಡೆಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಳಸಾ ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಒದಗಿಸಿಕೊಡುವಂತೆ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯಯನವರು ಜನ್ಮದಿನದ ಶುಭಾಶಯ ತಿಳಿಸಿ ನಾಲಾ ಯೋಜನೆಯ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಉತ್ತರ ಕರ್ನಾಟಕದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ನಿರ್ಣಾಯಕವಾಗಿರುವ ಯೋಜನೆಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF&CC) ವನ್ಯಜೀವಿ ಮಂಡಳಿಯ ಅನುಮೋದನೆ ಸಿಗದೆ ದೀರ್ಘಕಾಲದಿಂದ ಬಾಕಿ ಉಳಿದಿದೆ. ಆದರೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಕಳಸಾ ಬಂಡೂರಿಯಲ್ಲಿ ಕರ್ನಾಟಕ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದಂತೆ ಕಾನೂನುಬಾಹಿರ ಆದೇಶವನ್ನು ಹೊರಡಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಹದಾಯಿ ವಾಟರ್ ಡಿಸ್ಪ್ಯೂಟ್ ಟ್ರಿಬ್ಯೂನಲ್ 14-08-2018 ರಂದು ಘೋಷಿಸಲಾಯಿತು. 27-02-2020 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ) ರಾಜ್ಯ ಸರ್ಕಾರವು 16-06-2022 ರಂದು CWCಗೆ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ (ಲಿಫ್ಟ್ ಯೋಜನೆಗಳು) ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರದಿ ಸಲ್ಲಿಕೆ ಕುರಿತ ಪೋರ್ಟಲ್ ಸಂಖ್ಯೆಯನ್ನೂ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.
ಗೋವಾ ವನ್ಯಜೀವಿ ವಾರ್ಡನ್ ಆದೇಶವನ್ನು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ತೀರ್ಪು ಬಾಕಿ ಇದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಎನ್‌ಬಿಡಬ್ಲ್ಯುಎಲ್‌ನ ಸ್ಥಾಯಿ ಸಮಿತಿಯು ಜುಲೈ 31ರಂದು ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತನ್ನ ಸಭೆಯಲ್ಲಿ, ವಿಷಯವು ಉಪ-ನ್ಯಾಯ ಎಂದು ತಿಳಿಸಿ ಪ್ರಸ್ತಾಪವನ್ನು ಮುಂದೂಡಿದೆ. ಆದರೆ, ಅದೇ ಸ್ಥಾಯಿ ಸಮಿತಿಯಲ್ಲಿ ಆಗಸ್ಟ್ 23ರಂದು ನಡೆದ ಸಭೆಯಲ್ಲಿ ಗೋವಾ-ತಮ್ನಾರ್ ಟ್ರಾನ್ಸ್‌ಮಿಷನ್ ಲೈನ್‌ನ ಗೋವಾ ಭಾಗವನ್ನು ವನ್ಯಜೀವಿ ತೆರವಿಗೆ ಶಿಫಾರಸು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆಗಸ್ಟ್ 1ರಂದು ಇಂದನ ಸಚಿವರು ತಮ್ಮ ಪತ್ರದಲ್ಲಿ 72,817 ಮರಗಳ ಬದಲಿಗೆ 13,954 ಮರಗಳನ್ನು ಮಾತ್ರ ಕಡಿಯಲಾಗುವುದು ಎಂದು ಭರವಸೆ ನೀಡಿದ ನಂತರವೇ ಕರ್ನಾಟಕ ಈ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಸಿಎಂ ಹೇಳಿದರು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಮರವನ್ನು ಕಡಿಯುವುದು ಅಪೇಕ್ಷಣೀಯವಲ್ಲವಾದರೂ, ರಾಷ್ಟ್ರೀಯ ಅಭಿವೃದ್ಧಿಯ ಹಿತದೃಷ್ಟಿಯಿಂದ, ಆನೆ ಕಾರಿಡಾರ್ ದಾಟುವ ಜಮೀನುಗಳ ಹೊರತಾಗಿಯೂ ಕರ್ನಾಟಕವು ತಾತ್ವಿಕವಾಗಿ ಒಪ್ಪಲು ಸಿದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕಳಸಾ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಿಗದಿದ್ದರೆ, ಗೋವಾ-ತಮ್ನಾರ್ ಟ್ರಾನ್ಸ್ಮಿಷನ್ ಯೋಜನೆಗೆ ಅನುಮೋದನೆ ನೀಡುವುದನ್ನು ಖಂಡಿತವಾಗಿಯೂ ಪರಿಶೀಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
Advertisement