ಮುನಿರತ್ನಗೆ ಷರತ್ತುಬದ್ಧ ಜಾಮೀನು, ಅತ್ಯಾಚಾರ ಪ್ರಕರಣ ದಾಖಲು; ನಾಗಮಂಗಲ ಗಲಭೆ: ಅಶೋಕ್, ಶೋಭಾ ವಿರುದ್ಧ FIR; ಆಕ್ಷೇಪಾರ್ಹ ಹೇಳಿಕೆ ಯತ್ನಾಳ್ ವಿರುದ್ಧ ಹೈಕೋರ್ಟ್ ಕಿಡಿ! ಇವು ಇಂದಿನ ಪ್ರಮುಖ ಸುದ್ದಿಗಳು 19-09-24

ಮುನಿರತ್ನಗೆ ಷರತ್ತುಬದ್ಧ ಜಾಮೀನು, ಅತ್ಯಾಚಾರ ಪ್ರಕರಣ ದಾಖಲು; ನಾಗಮಂಗಲ ಗಲಭೆ: ಅಶೋಕ್, ಶೋಭಾ ವಿರುದ್ಧ FIR; ಆಕ್ಷೇಪಾರ್ಹ ಹೇಳಿಕೆ ಯತ್ನಾಳ್ ವಿರುದ್ಧ ಹೈಕೋರ್ಟ್ ಕಿಡಿ! ಇವು ಇಂದಿನ ಪ್ರಮುಖ ಸುದ್ದಿಗಳು 19-09-24

1. ಮುನಿರತ್ನಗೆ ಷರತ್ತುಬದ್ಧ ಜಾಮೀನು ಬೆನ್ನಲ್ಲೇ ಅತ್ಯಾಚಾರ ಪ್ರಕರಣ ದಾಖಲು

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ. 2 ಲಕ್ಷದ ಬಾಂಡ್, ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸದಂತೆ, ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿ ಬೆಂಗಳೂರಿನ 82ನೇ CCH ಕೋರ್ಟ್ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಜಮೀನು ನೀಡಿದ್ದಾರೆ. ಜೈಲಿನಿಂದ ಮುನಿರತ್ನ ಬಿಡುಗಡೆಯಾದರೂ ಸಹ ಸಂಕಷ್ಟ ತಪ್ಪಿದ್ದಲ್ಲ. ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಮುನಿರತ್ನ ಹಾಗೂ ಅವರ ಗನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್ ಸೇರಿದಂತೆ 7 ಮಂದಿ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಅಲ್ಲದೆ ಖಾಸಗಿ ರೆಸಾರ್ಟ್ ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತೆ ಡಿವೈಎಸ್ ಪಿ ದಿನಕರ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ.

2. ಸಿದ್ದರಾಮಯ್ಯ ಮೇಲಿನ ದೂರಿನ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ

ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರು ಇದೀಗ ಮತ್ತೊಂದು ದೂರಿಗೆ ಸಂಬಂಧಿಸಿ ಸರ್ಕಾರದಿಂದ ವರದಿ ಕೇಳಿದ್ದಾರೆ. ಸಿದ್ದರಾಮಯ್ಯ ಮೇಲಿನ ದೂರಿನ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಅವರ ಮೌಖಿಕ ಸೂಚನೆ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಶ್ರೀರಂಗಪಟ್ಟಣ, ವರುಣಾ ಕ್ಷೇತ್ರದಲ್ಲಿ 387 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡಿರುವ ಕುರಿತಂತೆ ವಿಸ್ತೃತ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ಪ್ರಾಧಿಕಾರದಲ್ಲಿ ಹಣ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಿಎಸ್ ನಟರಾಜ್ ಎಂಬವರು ಆಗಸ್ಟ್ 27ರಂದು ರಾಜ್ಯಪಾಲರಿಗೆ ದೂರು ನೀಡಿದ್ದರು.

3. ನಾಗಮಂಗಲ ಗಲಭೆ: ಮತ್ತೊಬ್ಬ ಅಧಿಕಾರಿ ತಲೆದಂಡ. ಅಶೋಕ್, ಶೋಭಾ ವಿರುದ್ಧ FIR

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ನಾಗಮಂಗಲ ಡಿವೈಎಸ್‌ಪಿ ಡಾ. ಸುಮಿತ್ ಅವರನ್ನು ಕರ್ತವ್ಯ ಲೋಪ, ನಿರ್ಲಕ್ಷ್ಯ ಆರೋಪದಡಿಯಲ್ಲಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತು ಮಾಡಿದ್ದಾರೆ. ಮತ್ತೊಂಡೆದೆ, ನಾಗಮಂಗಲ‌ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿಲ್ಲದ ವಿಡಿಯೋ, ಫೋಟೋ ಪೋಸ್ಟ್ ಮಾಡುವ ಮೂಲಕ ದೊಂಬಿ, ಗಲಭೆಗೆ ಪ್ರಚೋದನೆ ಆರೋಪದಡಿ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

4. ಸಚಿವ ದಿನೇಶ್ ಗುಂಡೂರಾವ್ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಯತ್ನಾಳ್ ವಿರುದ್ಧ ಹೈಕೋರ್ಟ್ ಕಿಡಿ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕೋರ್ಟ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಮ್ಮ ಕುಟುಂಬ ಹಾಗೂ ವೈಯಕ್ತಿಕ ನಿಂಧನೆ ಹೇಳಿಕೆ ನೀಡಿದ್ದ ಯತ್ನಾಳ್ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರು ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದರು. ತಮ್ಮ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಶಾಸಕರ ಕೀಳು ಅಭಿರುಚಿಯ ಹೇಳಿಕೆಯನ್ನು ಪ್ರಶ್ನಿಸಿದ ನ್ಯಾಯಾಧೀಶರು, ನೀವು ಹೇಳಿಕೆ ನೀಡಿದ್ದು ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು. ಹೇಳಿಕೆ ನೀಡಿದ್ದನ್ನ ಯತ್ನಾಳ್ ಪರ ವಕೀಲರು ಒಪ್ಪಿಕೊಂಡರು. ಹೀಗಾಗಿ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿದೆ.

5. ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ

ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೊಸಕೋಟೆಯ ಅವರ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣನವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಆದರೆ ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕೆಂಪಣ್ಣ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com