ಬೆಂಗಳೂರು: ಲೋಕಾಯುಕ್ತರು ಕಾನೂನು ಕ್ರಮ ಅಥವಾ ತನಿಖೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದ ರಹಸ್ಯ ಮಾಹಿತಿ ಸೋರಿಕೆಯಾದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲಾ ಥಾವರಚಂದ್ ಗೆಹ್ಲೋಟ್ ಅವರು ಮತ್ತೊಂದು ಪತ್ರ ಬರೆದಿದ್ದಾರೆ. ಈ ಹಿಂದೆ ಆಗಸ್ಟ್ 28 ರಂದು ಸರ್ಕಾರದಿಂದ ಸ್ಪಷ್ಟನೆ ಕೇಳಿ ರಾಜ್ಯಪಾಲರು ಪತ್ರ ಬರೆದಿದ್ದರು.
ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬರೆದ ಪತ್ರದಲ್ಲಿ, ವಿಪಕ್ಷ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೇಳಿ ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಈ ಪತ್ರದ ಬಗ್ಗೆಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕ್ಯಾಬಿನೆಟ್ ನಿರ್ಣಯ ಕಳುಹಿಸಿಕೊಡಲಾಗಿದೆ. ಆದರೆ ಲೋಕಾಯಕ್ತದವರು ರಾಜ್ಯಪಾಲರಿಗೆ ಬರೆದ ರಹಸ್ಯ ಪತ್ರದ ಬಗ್ಗೆ ಸರ್ಕಾರಕ್ಕೆ ಹೇಗೆ ಮಾಹಿತಿ ಬಂತು? ಅದರ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸೂಚಿಸಲಾಗಿದೆ.
ಜೆಡಿಎಸ್ ಮುಖಂಡ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿಯ ಮೂವರು ಮಾಜಿ ಸಚಿವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ ಎಂದು ಸರ್ಕಾರ ತಿಳಿಸಿತ್ತು.
ಸಚಿವ ಸಂಪುಟದ ನಿರ್ಣಯ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ಲೋಕಾಯುಕ್ತರು ಬರೆದ ಪತ್ರದ ಮಾಹಿತಿ ಸೋರಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಲೋಕಾಯುಕ್ತ, ಎಸ್‌ಐಟಿಗೂ ಪತ್ರ ಬರೆದಿದ್ದು, ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೇಳಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
Advertisement