ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 40 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಶಾಸಕ ಮುನಿರತ್ನ ತನ್ನ ವಿರೋಧಿಗಳನ್ನು ಹಣಿಯಲು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದಾರೆ ಎಂದು ಸಹ ದೂರಿದ್ದಾರೆ. ಆ ಮಹಿಳೆಯರು ಹಾಗೂ ಹನಿ ಟ್ರ್ಯಾಪ್‌ಗೆ ಒಳಗಾಗಿರುವ ಸಂತ್ರಸ್ತರನ್ನೂ ಪತ್ತೆ ಹಚ್ಚಬೇಕಾಗಿರುವುದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ದೂರುದಾರರ ಪ್ರಕಾರ, ಶಾಸಕರು ತಮ್ಮೊಂದಿಗಿನ ಸಂಭಾಷಣೆಯ ಸಮಯದಲ್ಲಿ, ತಮ್ಮ ರಾಜಕೀಯ ಪ್ರತಿಸ್ಪರ್ಧಿಯೊಬ್ಬರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿದ ಮಹಿಳೆ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಎಚ್‌ಐವಿ ಸೋಂಕಿತ ಮಹಿಳೆಯನ್ನು ಬಳಸಿಕೊಂಡು ಇನ್ನೊಬ್ಬ ವ್ಯಕ್ತಿಯನ್ನು ಬಲೆಗೆ ಬೀಳಿಸಲು ಸಹಾಯ ಮಾಡುವಂತೆ ಶಾಸಕರು ಕೇಳಿದ್ದರು. ಆದರೆ, ದೂರುದಾರರು ಅದಕ್ಕೆ ನಿರಾಕರಿಸಿದ್ದಾರೆ. ಅತ್ಯಾಚಾರದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಶಾಸಕರು ತಮ್ಮ ವಿರೋಧಿಗಳನ್ನು ಬಲೆಗೆ ಬೀಳಿಸಲು ಬಳಸಿದ್ದಾರೆ ಎನ್ನಲಾದ ಎಚ್‌ಐವಿ ಸೋಂಕಿತ ಮಹಿಳೆಯರನ್ನು ಈಗ ಗುರುತಿಸಬೇಕಾಗಿದೆ. ಇಂತಹ ಆರೋಪಗಳನ್ನು ಮಾಡಿರುವುದು ಅಪರೂಪದ ಪ್ರಕರಣ. ತನಿಖೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ನಾವು ತಜ್ಞರನ್ನು ಸಂಪರ್ಕಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಪ್ರತಿಸ್ಪರ್ಧಿಯೊಬ್ಬರನ್ನು ಬಲೆಗೆ ಬೀಳಿಸಲು ಶಾಸಕರು ಬಳಸಿಕೊಂಡಿದ್ದರು ಎನ್ನಲಾದ ಮಹಿಳೆಯನ್ನು ಪೊಲೀಸರು ಶೀಘ್ರದಲ್ಲೇ ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಆಕೆಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಲ್ಲಿ ಹನಿ ಟ್ರ್ಯಾಪ್‌ಗೆ ಬಲಿಯಾದವರನ್ನು ಪತ್ತೆ ಹಚ್ಚಿ ಎಚ್‌ಐವಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿ ತಿಳಿಸಿದ್ದಾರೆ. ದೂರುದಾರರನ್ನು ಹೆದರಿಸಲು ಮುನಿರತ್ನ ಇದನ್ನೇ ತಂತ್ರವಾಗಿ ಬಳಸಿಕೊಂಡಿರುವುದನ್ನು ತಳ್ಳಿಹಾಕಲಾವುದಿಲ್ಲ. ಹನಿ ಟ್ರ್ಯಾಪ್ ಸಂತ್ರಸ್ತರು ಶಾಸಕರ ವಿರುದ್ಧ ದೂರು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ನಿರೀಕ್ಷಿಸುತ್ತಿದ್ದಾರೆ. ಹನಿ ಟ್ರ್ಯಾಪ್‌ಗೆ ಬಲಿಯಾದವರಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಇದ್ದಾರೆ ಎನ್ನಲಾಗಿದೆ.
Advertisement