ಬೆಂಗಳೂರು: ನಿನ್ನೆಯಷ್ಟೇ ಕೇಂದ್ರ ಸರ್ಕಾರ ಭಾರತದಲ್ಲಿ ಹೊಸ ಆರ್ಥಿಕ ಕ್ರಾಂತಿಯನ್ನೇ ಬರೆದಿರುವ ಯುಪಿಐ ಪಾವತಿ ಕುರಿತ ಅಂಕಿಅಂಶ ಜಾರಿ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಬೆಂಗಳೂರು ಆಟೋ ಚಾಲಕ ತನ್ನ ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್ ಪಾವತಿ ಸ್ವೀಕರಿಸಿರುವ ವಿಚಾರ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರು ಐಟಿ ಸಿಟಿ. ಇಲ್ಲಿ ತಂತ್ರಜ್ಞಾನ, ತಾಂತ್ರಿಕ ವಿಚಾರಗಳಲ್ಲಿ ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಪೈಕಿ ಇದೀಗ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ಇದೀಗ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರಿನ ಆಟೋ ಚಾಲಕರು ಹಲವು ಸ್ಮಾರ್ಟ್ ಮಾರ್ಗಗಳನ್ನು ತ್ವರಿತವಾಗಿ ಬಳಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಭರಾಟೆ ಜೋರಾಗಿದ್ದ ವೇಳೆ ಬೆಂಗಳೂರಿನ ಆಟೋ ಚಾಲಕನೊಬ್ಬ ಕ್ರಿಪ್ಟೊಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಅಂಟಿಸಿದ್ದ. ಕ್ರಿಪ್ಟೋ ಕರೆನ್ಸಿ ಬಗ್ಗೆ ಜನರು ತಿಳಿದುಕೊಳ್ಳುವ ವೇಳೆ ಆಟೋ ಚಾಲಕ ಬಾಡಿಗೆ ಪಾವತಿ ರೂಪದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲು ಮುಂದಾಗಿದ್ದ. ಈ ರೀತಿಯ ಹಲವು ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರು ಆಟೋ ಚಾಲಕರು ಎಲ್ಲರಿಗಿಂತ ಮುಂದಿದ್ದಾರೆ ಅನ್ನೋದು ಸಾಬೀತು ಮಾಡಿದ್ದಾರೆ.
ಈ ಪಟ್ಟಿಗೆ ನೂತನ ಸೇರ್ಪಡೆಯಾಗಿ ಬೆಂಗಳೂರಿನ ಆಟೋ ಚಾಲಕ ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಂಡಿದ್ದಾನೆ. ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಸ್ಮಾರ್ಟ್‌ವಾಚ್ ಮೂಲಕ ಕೋಡ್ ತೋರಿಸಿ ಪಾವತಿಗೆ ಸುಲಭ ದಾರಿ ಅನುಸರಿಸಿದ್ದಾನೆ.
ಸ್ಮಾರ್ಟ್ ವಾಚ್ ನಲ್ಲಿ UPI ಕ್ಯೂಆರ್ ಕೋಡ್
ಬೆಂಗಳೂರಿನ ಆಟೋ ಚಾಲಕ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡಿದ್ದು, ಯುಪಿಐ ಪಾವತಿಗೆ ಸಾಮಾನ್ಯವಾಗಿ ಆಟೋ ಚಾಲಕರು ತಮ್ಮ ಆಟೋದಲ್ಲಿ ಕ್ಯೂಆರ್ ಕೋಡ್ ಅಂಟಿಸಿರುತ್ತಾರೆ. ಅಥವಾ ಕ್ಯೂಆರ್ ಕೋಡ್ ಫೋಟೋವನ್ನು ಲ್ಯಾಮಿನೇಷನ್ ಮಾಡಿಸಿಕೊಂಡು, ಪ್ಲಾಸ್ಟಿಕ್ ಒಳಗೆ ಇಟ್ಟುಕೊಂಡಿರುತ್ತಾರೆ. ಆದರೆ ಈ ಆಟೋ ಚಾಲಕ ಮಾತ್ರ ತಂತ್ರಜ್ಞಾನವನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಂಡಿದ್ದು, ಈ ಫೋಟೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ನೆಟ್ಟಿಗರ ಮೆಚ್ಚುಗೆ
ಆಟೋಚಾಲಕನ ವಿನೂತನ ಪ್ರಯತ್ನಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಹಲವರು ಆಟೋ ಚಾಲಕನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ದೇಶವನ್ನು ನೇರವಾಗಿ 2060ಕ್ಕೆ ಕೊಂಡೊಯ್ದಿದೆ ಎಂದು ಹಲವರು ಕಮೆಂಟ್ ಮಾಡಿದ್ದರೆ, ಮತ್ತೆ ಕೆಲ ಕಾಂಗ್ರೆಸ್ ಬೆಂಬಲಿಗರು ಇಂದಿರಾ ಗಾಂಧಿ, ರಾಜೀವ್ ಗಾಂಧಿಯ ತಂತ್ರಜ್ಞಾನ ಕೊಡುಗೆಯಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಗೆ ತಿವಿದ ಬಿಜೆಪಿ
ಬೆಂಗಳೂರಿನ ಆಟೋ ಚಾಲಕನ ಫೋಟೋವನ್ನು ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ ಇದನ್ನು ಒಮ್ಮೆ ನೋಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದೆ. ಆಟೋ ಚಾಲಕ ಬಾಡಿಗೆ ಪಾವತಿಗೆ ಯುಪಿಐ ಕ್ಯೂಆರ್ ಕೋಡ್ ಆಟೋದಲ್ಲಿ ಅಂಟಿಸಿಲ್ಲ, ಬದಲಾಗಿ ತನ್ನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ತೋರಿಸಿ ಪಾವತಿ ಮಾಡಿಸಿಕೊಳ್ಳುತ್ತಾನೆ. ಇದು ಭಾರತದಲ್ಲಾಗಿರುವ ಡಿಜಿಟಲ್ ಕ್ರಾಂತಿಗೆ ಸಾಕ್ಷಿ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿವಿದಿದೆ. ಭಾರತದ ಡಿಜಿಟಲ್ ಇಂಡಿಯಾ ಯೋಜನೆ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಆದರೆ ರಾಜಕೀಯ ಹಗ್ಗಜಗ್ಗಾಟಕ್ಕೂ ಇದು ಕಾರಣವಾಗಿದೆ.
ಡಿಜಿಟಲ್ ಕ್ರಾಂತಿ ಕುರಿತು ಟೀಕಿಸಿದ್ದ ಕಾಂಗ್ರೆಸ್ ನಾಯಕ ಚಿದಂಬರಂ
ಇನ್ನು ಈ ಹಿಂದೆ ಸಂಸತ್ ಕಲಾಪದಲ್ಲಿ ಮಾತಾಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಭಾರತದ ಡಿಮಾನಿಟೈಸೇಶನ್, ಡಿಜಿಟಲ್ ಇಂಡಿಯಾವನ್ನು ಅಣಕಿಸಿದ್ದರು. 5 ರೂಪಾಯಿ, 7 ರೂಪಾಯಿಗೆ ತರಕಾರಿ ಖರೀದಿಸಲು ಬೀದಿ ಬದಿ ವ್ಯಾಪಾರಿ ಬಳಿ ಪಿಒಎಸ್ ಸ್ವೈಪ್ ಮಶೀನ್ ಇದೆಯಾ, ಇಂಟರ್ನೆಟ್ ಇದೆಯಾ? ಇದೆಲ್ಲಾ ಭಾರತದಲ್ಲಿ ಸಾಧ್ಯ ಎಂದುಕೊಂಡಿದ್ದೀರಾ ಎಂದು ವ್ಯಂಗ್ಯವಾಗಿ ನಕ್ಕಿದ್ದರು.
ಇದಕ್ಕೆ ಕಾಂಗ್ರೆಸ್ ನ ಇತರೆ ಸದಸ್ಯರು ಮೇಜು ತಟ್ಟಿ ಬೆಂಬಲ ನೀಡಿದ್ದರು. ಇದಾದ ಬಳಿಕ ಹಲವು ಬಾರಿ ಡಿಜಿಟಲ್ ಇಂಡಿಯಾ ಕ್ರಾಂತಿಯನ್ನು ಪಟ್ಟಿ ಮಾಡಿರುವ ಬಿಜೆಪಿ, ಪದೇ ಪದೇ ಕಾಂಗ್ರೆಸ್ ನ ಕಾಲೆಳೆದಿದೆ. ಪಿ ಚಿದಂಬರಂ ಅಣಕಿಸುವಾಗ ಈ ಬದಲಾವಣೆ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ. ನಮ್ಮ ಬೆಂಗಳೂರಿನ ಆಟೋ ಚಾಲಕರು ಇಂಡಿಯಾ ಒಕ್ಕೂಟ ನಾಯಕರಿಂದ ಸ್ಮಾರ್ಟ್ ಆಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
Advertisement